ಕೆವಿಕೆಯ ಯಶಸ್ವಿ ತಂತ್ರಜ್ಞಾನಗಳ ಅನುಷ್ಟಾನ


ಸಮಸ್ಯೆ
ಮೈಸೂರು ಜಿಲ್ಲೆಯ (1.27 ಲಕ್ಷ ಹೇ.) ಸುಮಾರು ಶೇ.10 ರಷ್ಟು ಭತ್ತದ ಕ್ಷೇತ್ರವು ಕ್ಷಾರ ಸಮಸ್ಯೆಯನ್ನು ಹೊಂದಿದ್ದು ಭತ್ತದ ಇಳುವರಿಗೆ ಹಾನಿಯಾಗುತ್ತಿದೆ.

ತಂತ್ರಜ್ಞಾನದ ವಿವರ
ಹೆಚ್ಚು ಪ್ರಚಲಿತ ತಳಿ ಐಆರ್ 64 ರ ಬದಲಾಗಿ 2012-13 ಮತ್ತು 2013-14 ರಲ್ಲಿ ಸಿಎಸ್ಆರ್ 22 ತಳಿಯನ್ನು ಪರೀಶಿಲಿಸಲಾಯಿತು. ಐಆರ್ 64 ತಳಿಯು ಪ್ರತಿ ಹೆಕ್ಟೇರ್ ಗೆ 40-45 ಕ್ವಿಂಟಾಲ್ ನೀಡಿದರೆ, ಸಿಎಸ್ಆರ್ 22 ತಳಿಯು ಪ್ರತಿ ಹೆಕ್ಟೇರ್ ಗೆ 50 ಕ್ವಿಂಟಾಲ್ ಇಳುವರಿ ನೀಡಿತು. ಜಿಜಿವಿ-05-02, ಉತ್ತಮ ಕಾಳಿನ ಜಾತಿಯಾಗಿದೆ. ಈ ಪ್ರಾತ್ಯಕ್ಷಿಕೆಯನ್ನು 2016-17 ರಲ್ಲಿ ಕೈಗೊಳ್ಳಲಾಗಿತ್ತು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ರಾಯಚೂರು ಮತ್ತು ಸಿಎಸ್ಎಸ್ಆರ್, ಕರ್ನಾಲ್

ಸಾಧನೆಗಳು
 • ಜಿಜಿವಿ-05-01 (ಗಂಗಾವತಿ ಸೋನಾ) ತಳಿಯು ಉಪ್ಪಿನಂಶವನ್ನು ತಡೆಯುವ ಗುಣ ಹೊಂದಿದ್ದು, 2016-17 ರಲ್ಲಿ ಈ ತಳಿಯನ್ನು ಪರೀಶಿಲಿಸಲಾಯಿತು. ಇಳುವರಿಗೆ ಹೋಲಿಸಿದರೆ ಜಿಜಿವಿ-05-01 ತಳಿಯು ಸಿಎಸ್ಆರ್ ತಳಿಗೆ ಸಮಾನವಾಗಿದೆ. ಜಿಜಿವಿ-05-01 ತಳಿಯು ಉತ್ತಮ ಗುಣಮಟ್ಟದ ಕಾಳಿನ ತಳಿಯಾಗಿದ್ದು, ಉತ್ತಮ ಬೆಲೆ ಮತ್ತು ಮಾರುಕಟ್ಟೆಯನ್ನು ಹೊಂದಿದೆ (ಜಿಜಿವಿ-05-01 ತಳಿಯ ಪ್ರತಿ ಕ್ವಿ ರೂ.1800/- ಮತ್ತು ಐಆರ್ 64 ಮತ್ತು ಸಿಎಸ್ ಆರ್ 22 ತಳಿಗಳಿಗೆ ರೂ.1500/ಕ್ವಿ)., ಪ್ರತಿ ಹೆಕ್ಟೇರ್ ಗೆ ರೂ.54,000/- ಗಳ ನಿವ್ವಳ ಲಾಭವನ್ನು ಪಡೆಯಬಹುದು, ಇದು ಐಆರ್ 64 ತಳಿಗಿಂತ ಶೇ. 29 ರಷ್ಟು ಅಧಿಕವಾಗಿದೆ.
 • 1. ಜಿಜಿವಿ-05-01 ತಳಿಯು ಉತ್ತಮ ಮತ್ತು ಪ್ರೇರಕವಾಗಿದ್ದು ಹಾಗೂ ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ವಿವಿಧ ಸ್ಥಳಗಳಲ್ಲಿ ಪರೀಶಿಲನೆ ಮಾಡಲಾಗಿದ್ದು, ವಲಯ 6 ಕ್ಕೆ ಶಿಫಾರಸ್ಸು ಮಾಡಲಾಗಿದೆ.              2. ಪ್ರಸ್ತುತ ಜಿಜಿವಿ-05-01 ತಳಿಯು 10 ಹೆಕ್ಟೇರ್ ಪ್ರದೇಶದಲ್ಲಿದ್ದು, ಬೀಜ ಸರಪಳಿಯಲ್ಲಿ ಬಂದ ನಂತರ ಇದರ ವಿಸ್ತೀರ್ಣವನ್ನು ಹೆಚ್ಚಿಸಬಹುದು.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ 1.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಹೆಚ್ಚಿನ ಬಿತ್ತನೆ ಬೀಜದ ಉಪಯೋಗ, ಅತಿಯಾದ ರಸಗೊಬ್ಬರಗಳು ಮ್ತತು ನೀರಿನ ಬಳಕೆಯಿಂದ ಭತ್ತದಲ್ಲಿ ಲಾಭವು ಕಡಿಮೆಯಾಗುತ್ತಿದೆ. ಅತಿ ಹೆಚ್ಚಿನ ಉತ್ಪಾದನಾ ವೆಚ್ಚದಿಂದ ಭತ್ತದಲ್ಲಿ ಪ್ರತಿ ಹೆಕ್ಟೇರ್ ಗೆ ರೂ.25,000/- ದಷ್ಟು ಲಾಭವು ಕಡಿಮೆಯಾಗುತ್ತಿದೆ.

ತಂತ್ರಜ್ಞಾನದ ವಿವರ
2011- 12 ರಲ್ಲಿ ಜೆಸ್ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಭತ್ತದಲ್ಲಿ ಶ್ರೀ ಪದ್ಧತಿಯನ್ನು ಪರಿಚಯಿಸಲಾಗಿದ್ದು, ಸಸಿಗಳನ್ನು ನಾಟಿ ಮಾಡಿ (25- 30 ದಿನಗಳ ಬದಲಾಗಿ 12 ರಿಂದ 14 ದಿನಗಳ ಸಸಿಗಳು), ಅಧಿಕ ಸಾವಯವ ವಸ್ತುವಿನ ಬಳಕೆ, ಚೆನ್ನಾಗಿ ಗಾಳಿಯಾಡಲು ಮತ್ತು ಬೆಳವಣಿಗೆಗೆ ಹೆಚ್ಚು ಅಂತರದಲ್ಲಿ ನಾಟಿ ಮಾಡಿ, ಕಳೆ ನಿರ್ವಹಣೆ (ಕೊನೊ ವೀಡರ್) ಮತ್ತು ಹಸಿ ಮತ್ತು ಒಣಗಿಸುವ ವಿಧಾನದ ನೀರಾವರಿ ಪದ್ಧತಿ ಅನುಸರಿಸುವುದನ್ನು ಪ್ರಾತ್ಯಕ್ಷಿಕೆ ಮಾಡಲಾಯಿತು. ಈ ಪ್ರಾತ್ಯಕ್ಷಿಕೆಯನ್ನು 2016-17 ಮತ್ತು 2017-18 ರಲ್ಲಿ ಪುನಃ ಕೈಗೊಳ್ಳಲಾಗಿತ್ತು. ಶ್ರೀ ಪದ್ಧತಿಯನ್ನು ಉತ್ತೇಜಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ತಾಂತ್ರಿಕ ಮಾಹಿತಿಯನ್ನು ವಿಸ್ತರಿಸಲಾಯಿತು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಸಾಧನೆಗಳು
 • ಒಂದು ಹೆಕ್ಟೇರ್ ಗೆ ಬಳಸಲಾಗುತ್ತಿದ್ದ 62.5 ಕೆಜಿ ಬಿತ್ತನೆ ಬೀಜವನ್ನು 12.5 ಕೆಜಿಗೆ ಕಡಿಮೆಗೊಳಿಸಲಾಗಿದ್ದು, ನಾಟಿಯ ಸಮಯದಲ್ಲಿ ಕೂಲಿ ಆಳುಗಳ ಖರ್ಚನ್ನು ಶೇ. 50 ರಷ್ಟು ಕಡಿಮೆಮಾಡುವುದರ ಜೊತೆಗೆ ಶೇ. 80 ರಷ್ಟು ಕಳೆಯನ್ನು ನಿಯಂತ್ರಿಸಬಹುದು. ಪ್ರತಿ ಹೆಕ್ಟೇರ್ ಗೆ ಉತ್ಪಾದನಾ ವೆಚ್ಚವನ್ನು ರೂ. 40,000/- (ಸಾಂಪ್ರದಾಯಕ ಪದ್ಧತಿಯಿಂದ)ದಿಂದ ರೂ.33,000/- ಕ್ಕೆ ಕಡಿಮೆಗೊಳಿಸಬಹುದು.
 • ಇದರ ಜೊತೆಗೆ, ಹೆಚ್ಚಿನ ಅಂತರದ ಜಾಗ ಮತ್ತು ಕಡಿಮೆ ಗಿಡಗಳ ಸಾಂದ್ರತೆಯಿಂದ ಕೀಟ ಮತ್ತು ರೋಗಗಳನ್ನು ಕಡಿಮೆ ಮಾಡುವುದು.
 • ನೀರಾವರಿ ನೀರಿನ ಮಿಶ್ರ ಅನುಭವ: ಚಾನೆಲ್ ನೀರಿನ ಕೊನೆಯ ಭಾಗದಲ್ಲಿರುವ ರೈತರು ಶೇ. 50 ರಷ್ಟು ನೀರಾವರಿ ನೀರನ್ನು ಕಡಿಮೆ ಮಾಡಿದ್ದಾರೆ. ಹೆಚ್ಚಿನ ಪ್ರಮಾಣದ ನೀರಿನ ಲಭ್ಯತೆಯಿರುವ ರೈತರು ನೀರಿನ ಉಪಯೋಗವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
 • ಮೈಸೂರು ಜಿಲ್ಲೆಯಲ್ಲಿ 60 ಹಕ್ಟೇರ್ ಪ್ರದೇಶಕ್ಕೆ ಶ್ರೀ ಪದ್ಧತಿಯ ವಿಸ್ತರಣೆಯಾಗಿದ್ದು, ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಲ್ಲಿ ಹೆಚ್ಚು ಪ್ರಚಲಿತವಾಗಿದ್ದು, ನಾಟಿ ಮತ್ತು ಕೂಲಿ ಆಳುಗಳ ಮೇಲೆ ಅವಲಂಬನೆ ಕಡಿಮೆಯಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗಿದೆ.
3. ರಾಗಿಯಲ್ಲಿ ಗುಳಿ ಪದ್ದತಿ ಸಮಸ್ಯೆ:
ಮೈಸೂರು ಜಿಲ್ಲೆಯಲ್ಲಿ ರಾಗಿಯು ಪ್ರಮುಖ ಬೆಳೆಯಾಗಿದ್ದು,ಸುಮಾರು 40,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ರಾಗಿಯನ್ನು ಚೆಲ್ಲುವ ಮೂಲಕ ಬಿತ್ತನೆ ಮಾಡಲಾಗುತ್ತಿದ್ದು, ಅತಿ ಕಡಿಮೆ ಸಂಖ್ಯೆಯ ರೈತರು ಸಾಲು ಬಿತ್ತನೆಯನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ರಾಗಿಯನ್ನು ನಾಟಿ ಮಾಡುವುದು ಕಣ್ಮರೆಯಾಗಿದೆ.

ವಿವರ
2017-18 ರಲ್ಲಿ ಗುಳಿ ಪದ್ಧತಿಯನ್ನು ಪ್ರಾತ್ಯಕ್ಷಿಕೆ ಮಾಡಲಾಗಿದ್ದು, ಭತ್ತದ ಶ್ರೀ ಪದ್ಧತಿಯ ಸಾಲುಗಳಲ್ಲಿ 14-16 ದಿನಗಳ ಸಸಿಗಳನ್ನು ಗುಳಿ ಪದ್ಧತಿಯಲ್ಲಿ ನಾಟಿ ಮಾಡಿ (30 -30 ಸೆಂ.ಮೀ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ) ಸೈಕಲ್ ವೀಡರ್ ನ ಸಹಾಯದಿಂದ ಕಳೆ ನಿರ್ವಹಣೆ ಮಾಡುವುದು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

> ಸಾಧನೆಗಳು
 • ಈ ತಂತ್ರಜ್ಞಾನದ ಫಲಿತಾಂಶಗಳು ಬಹಳ ಪ್ರೋತ್ಸಾಹದಾಯಕವಾಗಿವೆ. ಚೆಲ್ಲುವ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್ ಗೆ 20 ಕ್ವಿಂಟಾಲ್ ಇಳುವರಿ ದೊರೆತರೆ ಗುಳಿ ಪದ್ಧತಿಯಲ್ಲಿ 30 ಕ್ವಿಂಟಾಲ್ ಇಳುವರಿ ಪಡೆಯಬಹುದು (ಶೇ. 75 ರಷ್ಟು ಹೆಚ್ಚಿನ). ಗುಳಿ ಪದ್ಧತಿಯಲ್ಲಿ ಒಟ್ಟು ಲಾಭವು ಪ್ರತಿ ಹಕ್ಟೇರ್ ಗೆ ರೂ. 31,000/- ದಿಂದ ರೂ. 65,000/- ರಷ್ಟಾಗುವುದು (ದುಪ್ಪಟ್ಟಾಗುವುದು) ಅಂದರೆ ಶೇ. 117 ರಷ್ಟು ಹೆಚ್ಚಾಗುವುದು.
 • ಈ ಪದ್ಧತಿಯನ್ನು 30 ಹಕ್ಟೇರ್ ಪ್ರದೇಶದಲ್ಲಿ ಸುಮಾರು 75 ರೈತರು ಅನುಸರಿಸುತ್ತಿದ್ದಾರೆ. ಈ ತಂತ್ರಜ್ಞಾನವು ಕಪ್ಪು ಮಣ್ಣಿಗೆ ಹೆಚ್ಚು ಸೂಕ್ತವಾಗಿದೆ.
ಸಮಸ್ಯೆ
ಮೊದಲ ವರ್ಷ 2013-14ರಲ್ಲಿ ಕೆಆರ್ ಹೆಚ್ -4 ಹೈಬ್ರೀಡ್ ಭತ್ತದ ಬೀಜೋತ್ಪಾದನೆಯ ತಂತ್ರಜ್ಞಾನ ಪರಿಶೀಲನೆಯನ್ನು ಕೈಗೊಳ್ಳಲಾಯಿತು. ಆ ವರ್ಷ ಬೀಜೋತ್ಪಾದನೆ ಬದಲಾಗಿ ಕೆಆರ್ ಹೆಚ್ 4 ಹೈಬ್ರೀಡ್ ಭತ್ತದ ಇಳುವರಿ ಪರೀಕ್ಷಿಸಲು ರೈತರು ಹೆಚ್ಚಿನ ಆಸಕ್ತಿ ಹೊಂದಿ ಸುಮಾರು 40 ರೈತರು ಪ್ರಾತ್ಯಕ್ಷಿಕೆ ಕೈಗೊಂಡರು. ಭತ್ತದ ಇಳುವರಿ ಚೆನ್ನಾಗಿ ಬಂದಿದ್ದರೂ, ಸಾರಜನಕ ಹಾಗು ಪೊಟ್ಯಾಶ್ ನ ಅಸಮರ್ಪಕ ಬಳಕೆಯಿಂದ, ಅಂದರೆ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಕೊಡುವುದು ಹಾಗು ಪೊಟ್ಯಾಷ್ ಗೊಬ್ಬರದ ಬಳಕೆ ಇಲ್ಲದಿರುವುದರಿಂದ, ಹೆಚ್ಚಿನ ರೋಗ ಹಾಗು ಕೀಟದ ಬಾಧೆಯುಂಟಾಯಿತು. ಕೇವಲ ಸಾರಜನಕ ಗೊಬ್ಬರ ನೀಡಿದ್ದರಿಂದ ಗಿಡ ಹೆಚ್ಚು ಎತ್ತರ ಬೆಳೆದು ನೆಲಕ್ಕೆ ಬೀಳಲಾರಂಭಿಸಿತು. ಇದನ್ನು ಗಮನಿಸಿದ ಜೆಎಸ್ಎಸ್ ಕೆವಿಕೆಯು, ಕೆಆರ್ ಹೆಚ್ 4 ಹೈಬ್ರೀಡ್ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು 2014-15 ರಲ್ಲಿ ಕೈಗೊಂಡಿತು.

ತಂತ್ರಜ್ಞಾನದ ವಿವರ:
ಕೆಆರ್ ಹೆಚ್ 4 ಹೈಬ್ರೀಡ್ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆಯಡಿ 2015ರಲ್ಲಿ ಸಾರಜನಕದ 3 ಹಂತದಲ್ಲಿ ( ಮೊದಲನೇ ಬಾರಿ ನಾಟಿ ಸಮಯದಲ್ಲಿ ಶೇ 50ರಷ್ಟು ಸಾರಜನಕ, ಶೇ 25ರಷ್ಟು ನಾಟಿ ಮಾಡಿದ 25 ದಿನಗಳಲ್ಲಿ ಹಾಗು ಇನ್ನುಳಿದ ಶೇ.25ರಷ್ಟು 45-50 ದಿನಗಳಲ್ಲಿ) ಹಾಗು ಪೊಟ್ಯಾಷ್ ಗೊಬ್ಬರವನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ನಾಟಿಯಲ್ಲಿ ಮೂಲ ಗೊಬ್ಬರವಾಗಿ ಬಳಸಲು ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಸಾಧನೆ:
 • ಸಾರಜನಕದ ಮಿತ ಬಳಕೆ ಹಾಗು ಹಂತ ಹಂತವಾಗಿ ಬಳಸಿದ್ದರಿಂದ, ಗಿಡ ನೆಲಕ್ಕೆ ಉರುಳದೆ ಗಟ್ಟಿಯಾಗಿ, ನೇರವಾಗಿ ನಿಂತುಕೊಳ್ಳುವಂತಾಯಿತು.
 • ಈ ಸಂಕರಣ ತಳಿಯು ರೈತ ಪದ್ಧತಿಯ ತಳಿಯಾದ ಜ್ಯೋತಿಗಿಂತ (45 ಕ್ವಿ/ಹೆ) ಹೆಚ್ಚಿನ ಇಳುವರಿ ಅಂದರೆ 70ಕ್ವಿ/ಹೆ ಬಂದಿದ್ದು, ರೈತ ಪದ್ಧತಿಗಿಂತ ಶೇ 55 ರಷ್ಟು ಹೆಚ್ಚುವರಿ ಇಳುವರಿಯನ್ನು ಈ ಸಂಕರಣ ತಳಿಯಾದ ಕೆಆರ್ ಹೆಚ್-4ನಲ್ಲಿ ಪಡೆದು, ರೂ. 31,300/-ಹೆ ಗೆ (ಶೇ 38 ರಷ್ಟು) ಹೆಚ್ಚಿನ ಲಾಭವನ್ನು ಪಡೆದು ಯಶಸ್ವಿಯಾದರು (ದರ- ಜ್ಯೋತಿ ರೂ.1800/ಕ್ವಿ, ಕೆಆರ್ ಹೆಚ್-4 ರೂ 1600/ಕ್ವಿ).
 • ಮೈಸೂರು ಜಿಲ್ಲೆಯಲ್ಲಿ ಈಗ ಕೆಆರ್ ಹೆಚ್-4 ಭತ್ತವನ್ನು ಸುಮಾರು 400 ಹೆ ಪ್ರದೇಶದಲ್ಲಿ , ಪೋಷಕಾಂಶಗಳ ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ರೈತರು ಬೆಳೆಯುತ್ತಿದ್ದಾರೆ.
ಸಮಸ್ಯೆ
ಮೈಸೂರಿನಲ್ಲಿ ಸಿರಿಧಾನ್ಯವಾದ ಸಾಮೆ ಬೆಳೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಬಿತ್ತನೆ ಬೀಜದ ಕೊರತೆ ನೀಗಿಸಲು ಮುಂಚೂಣಿ ಪ್ರಾತ್ಯಕ್ಷಿಕೆಯಡಿ ಸಾಮೆಯ ಬೀಜೋತ್ಪಾದನೆಯನ್ನು ಕೈಗೊಳ್ಳಲಾಯಿತು.

ತಂತ್ರಜ್ಞಾನದ ವಿವರ
ಸಾಮೆ ಡಿಹೆಚ್ಎಲ್ಎಂ 36-3 ತಳಿಯು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ತಳಿ. ಇದು ಅತಿ ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು, ಪ್ರತಿ ಹೆಕ್ಟೇರಿಗೆ 21ಕ್ವಿ ಇಳುವರಿ ನೀಡುತ್ತದೆ. ಸಾಮೆ ಬೆಳೆಯ ಬೀಜೋತ್ಪಾದನಾ ಪ್ರಾತ್ಯಕ್ಷಿಕೆಯನ್ನು ಮೊದಲ ಬಾರಿಗೆ 2016-17ರಲ್ಲಿ, ಕೇವಲ 4 ರೈತರೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. ಮಳೆಯ ಅಭಾವದಿಂದ, ಇನ್ನುಳಿದ ರೈತರ ಬೆಳೆ ನಾಶವಾಗಿದ್ದರಿಂದ, ಈ ಪ್ರಾತ್ಯಕ್ಷಿಕೆಯನ್ನು ಪುನ: 2017-18 ರಲ್ಲಿ ಪುನರಾವರ್ತಿಸಲಾಯಿತು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಸಾಧನೆ:
 • ರೈತರು ಈ ತಳಿಯನ್ನು ಬಿತ್ತಿ ಸರಾಸರಿ ಬೀಜದ ಇಳುವರಿ 10 ಕ್ವಿ/ಹೆಗೆ ತೆಗೆಯಲು ಯಶಸ್ವಿಯಾಗಿದ್ದಾರೆ. ಅಲ್ಲದೇ, ನಿವ್ವಳ ಲಾಭ ರೂ. 22,000/-ಹೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೀಜೋತ್ಪಾದನೆಯಲ್ಲಿ ಬೆಳೆದ ರೈತರು ಬೀಜವನ್ನು ಕಾಳಾಗಿ ರೂ. 2000/-ಕ್ವಿಗೆ ಮಾರಾಟ ಮಾಡುವ ಬದಲು, ಬೀಜವಾಗಿ ಮಾರಾಟ ಮಾಡಿ ಬೇರೆ ರೈತರಿಗಿಂತ ರೂ. 10,000/-ದಷ್ಟು ಹೆಚ್ಚಿನ ನಿವ್ವಳ ಲಾಭವನ್ನು ಪಡೆದುಕೊಂಡಿದ್ದಾರೆ.
 • ಈ ಪ್ರಾತ್ಯಕ್ಷಿಕೆಯಿಂದ ರೈತರು ಸಾಮೆಯನ್ನು ಕಾಳಾಗಿ ಬೆಳೆದು ಮಾರಾಟ ಮಾಡುವುದಕ್ಕಿಂದ, ಬೀಜವಾಗಿ ಅಥವಾ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಲಾಭವನ್ನು ದ್ವಿಗುಣಗೊಳಿಸಬಹುದು. ಬಿತ್ತನೆ ಬೀಜ ಬದಲಾವಣೆ ಮಾಡುವುದರಿಂದ ಶೇ.20ರಷ್ಟು ಇಳುವರಿ ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಯಿತು.
 • ಕೆವಿಕೆಯು ಬೀಜೋತ್ಪಾದನೆಯಿಂದ ಒಂದು ಕ್ವಿಂಟಾಲ್ ಭತ್ತವನ್ನು ಕಾಳಾಗಿ ರೂ. 2000/-ಕ್ವಿಗೆ ಮಾರಾಟ ಮಾಡುವ ಬದಲು, ಬೆರಕೆ ತೆಗೆದು, ಸಂಸ್ಕರಿಸಿ, ಪೊಟ್ಟಣೀಕರಿಸಿ, ಪ್ರಾಮಾಣೀಕರಿಸಿ ರೂ 4000/-ಕ್ವಿ ಗೆ ಮಾರಾಟ ಮಾಡುವುದರಿಂದ, ಒಂದು ಹೆಕ್ಟೇರಿಗೆ 1 ಲಕ್ಷದಷ್ಟು ಹೆಚ್ಚಿನ ನಿವ್ವಳ ಲಾಭವನ್ನು ಪಡೆಯಬಹುದು.
ಸಮಸ್ಯೆ:
ಮೈಸೂರಿನ ಶೇ.30ರಷ್ಟು ಭತ್ತದ ಜಮೀನಿನಲ್ಲಿ ರೈತರು ಜ್ಯೋತಿ ತಳಿಯನ್ನು ಬೆಳೆಯುತ್ತಾರೆ. (1.04 ಲಕ್ಷ ಹೆ ಪ್ರದೇಶದಲ್ಲಿ, ಭತ್ತದ ತಳಿ ಜ್ಯೋತಿಯನ್ನು ರೈತರು ಬೆಳೆಯುತ್ತಾರೆ.) ಈ ತಳಿಯನ್ನು ನಿರಂತರವಾಗಿ ಹಲವು ವರ್ಷಗಳಿಂದ ಬೆಳೆಯುತ್ತಿರುವುದರಿಂದ, ಸರ್ಕಾರವು ಈ ತಳಿಯು 10ವರ್ಷಕ್ಕಿಂತ ಹಳೆಯ ತಳಿಯೆಂದು ಪರಿಗಣಿಸಿ, ಈ ತಳಿಯ ಬಿತ್ತನೆ ಬೀಜವನ್ನು ವಿತರಿಸುವುದನ್ನು ನಿಲ್ಲಿಸಿದೆ. ಆದ್ದರಿಂದ ಈ ತಳಿಯ ಉತ್ತಮ ಗುಣಮಟ್ಟದ ಪ್ರಾಮಾಣಿತ ಬೀಜದ ಕೊರತೆಯಿಂದ, ರೈತರು ಸ್ಥಳೀಯವಾಗಿ ರೈತರ ಬಳಿಯಲ್ಲಿಯೇ ದೊರಕುವ ಕಳಪೆ ಬಿತ್ತನೆ ಬೀಜ ಬಳಸಲು ಪ್ರಾರಂಭಿಸಿದ್ದರಿಂದ, ಈ ತಳಿಯು ಬೆಂಕಿ ರೋಗ ಹಾಗು ಕುತ್ತಿಗೆ ರೋಗವನ್ನು ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡು, ಹೆಚ್ಚು ರೋಗಕ್ಕೆ ತುತ್ತಾಗುತ್ತಿದೆ. ಇದರಿಂದ ರೈತರು ಹೆಚ್ಚಿನ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದನ್ನು ಗಮನಿಸಿದ ಕೃಷಿ ವಿಜ್ಞಾನ ಕೇಂದ್ರವು ಉತ್ತಮ ಬಿತ್ತನೆ ಬೀಜವನ್ನು ಒದಗಿಸುವ ಸಲುವಾಗಿ ಪ್ರಾಮಾಣಿತ ಬಿತ್ತನೆ ಬೀಜದ ಬೀಜೋತ್ಪಾದನೆಯನ್ನು ಕೈಗೊಂಡಿತು.

ತಂತ್ರಜ್ಞಾನದ ವಿವರ
ಜ್ಯೋತಿ ಭತ್ತದ ತಳಿಯು ಕುಸುಬಲಕ್ಕಿಗೆ ಕೇರಳಕ್ಕೆ ರಫ್ತಾಗುತ್ತದೆ. ಮೈಸೂರು ಕೇರಳಕ್ಕೆ ಹತ್ತಿರವಿರುವುದರಿಂದ, ಒಳ್ಳೆಯ ದರದೊಂದಿಗೆ ಶೀಘ್ರವಾಗಿ ಮಾರಾಟವಾಗುತ್ತದೆ. ಈ ಕಾರಣದಿಂದಾಗಿ, ರೈತರು ಜ್ಯೋತಿ ತಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ರೈತರು ಲಾಭವನ್ನಷ್ಟೇ ಗುರಿಯಾಗಿಟ್ಟುಕೊಂಡು ಈ ತಳಿಯನ್ನು ಬೆಳೆಯುತ್ತಿರುವುದರಿಂದ, ಉತ್ತಮ ಬಿತ್ತನೆ ಬೀಜವನ್ನು ಒದಗಿಸಲು ಬೀಜೋತ್ಪಾದನಾ ತಂತ್ರಜ್ಞಾನವನ್ನು ಪರಿಚಯಿಸಲಾಯಿತು.

ತಂತ್ರಜ್ಞಾನದ ಮೂಲ :
ಕೇರಳ ಕೃಷಿ ವಿಶ್ವವಿದ್ಯಾಲಯ, ಕೇರಳ

ಸಾಧನೆ:
 • ಬೀಜೋತ್ಪಾದನೆಗಾಗಿ ಮೂಲ ಬಿತ್ತನೆ ಬೀಜವನ್ನು 2016ರಲ್ಲಿ ಕೇರಳ ವಿಶ್ವವಿದ್ಯಾಲಯದಿಂದ ಪಡೆದುಕೊಂಡು 10 ಹೆ. ಪ್ರದೇಶದಲ್ಲಿ ಬೀಜೋತ್ಪಾದನೆಯನ್ನು ಕೈಗೊಂಡಿತು
 • ಸುಮಾರು 200 ಕ್ವಿ ಆಧಾರಿತ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿ 340 ಹೆ ಪ್ರದೇಶದಲ್ಲಿ ನೇರವಾಗಿ ರೈತರ ಜಮೀನಿನಲ್ಲಿ ಬಿತ್ತನೆಗೆ ಬಳಸಲಾಯಿತು. ಅಲ್ಲದೇ, ರಾಷ್ಟ್ರೀಯ ಬೀಜ ನಿಗಮಕ್ಕೆ ಹಾಗು ಕೆಲವು ಖಾಸಗಿ ಕಂಪನಿಗಳಿಗೆ ಒದಗಿಸಿ ಅವರ ಮುಖಾಂತರ ಪ್ರಾಮಾಣಿತ ಬಿತ್ತನೆ ಬೀಜವನ್ನು ಬೆಳೆಸಿ, ಸುಮಾರು 22,500 ಹೆ ಪ್ರದೇಶಕ್ಕೆ ಪ್ರಾಮಾಣಿತ ಬಿತ್ತನೆ ಬೀಜವನ್ನು ರೈತರಿಗೆ ಒದಗಿಸಲಾಯಿತು. ಇದಲ್ಲದೇ, ಕೆವಿಕೆಯು ನೇರವಾಗಿ 2017ರಿನ ಮುಂಗಾರಿನಲ್ಲಿ 83 ಹೆ ಪ್ರದೇಶ ಮತ್ತು 2018ರ ಬೇಸಿಗೆಯಲ್ಲಿ 290 ಹೆ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಬದಲಾವಣೆ ಮಾಡುವಲ್ಲಿ ಯಶಸ್ವಿಯಾಯಿತು. ಇದರಿಂದ ಕೆವಿಕೆಯು ಕೇವಲ ಬಿತ್ತನೆ ಬೀಜ ಬದಲಾವಣೆ ಮಾಡುವುದರಿಂದ ಶೇ.20ರಷ್ಟು ಇಳುವರಿ ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಯಿತು. ಕೆವಿಕೆಯು ಬೀಜೋತ್ಪಾದನೆಯಿಂದ ಒಂದು ಕ್ವಿಂಟಾಲ್ ಭತ್ತವನ್ನು ಕಾಳಾಗಿ ರೂ. 2000/-ಕ್ವಿಗೆ ಮಾರಾಟ ಮಾಡುವ ಬದಲು, ಬೆರಕೆ ತೆಗೆದು, ಸಂಸ್ಕರಿಸಿ, ಪೊಟ್ಟಣೀಕರಿಸಿ, ಪ್ರಾಮಾಣೀಕರಿಸಿ ರೂ 4000/-ಕ್ವಿ ಗೆ ಮಾರಾಟ ಮಾಡುವುದರಿಂದ, ಒಂದು ಹೆಕ್ಟೇರಿಗೆ 1 ಲಕ್ಷದಷ್ಟು ಹೆಚ್ಚಿನ ನಿವ್ವಳ ಲಾಭವನ್ನು ಪಡೆಯಬಹುದು.
ಸಮಸ್ಯೆ:
ಮೈಸೂರು ಜಿಲ್ಲೆಯ ಹುಣಸೂರಿನ ಸುಮಾರು 11,500 ಹೆ. ಪ್ರದೇಶದಲ್ಲಿ ಅವರೆಯನ್ನು ಬೆಳೆಯಲಾಗುತ್ತದೆ. ಸಾಮಾನ್ಯವಾಗಿ 4-6 ತಿಂಗಳ ಅವಧಿಯ ಸ್ಥಳೀಯ ತಳಿಗಳನ್ನು ಬೆಳೆಯುತ್ತಾರೆ. ಈ ಬೆಳೆಯು ನಿರ್ಧಿಷ್ಠ ಹಂಗಾಮಿನಲ್ಲಿ ಬಿತ್ತನೆ ಮಾಡಿದರೂ ಒಂದೇ ಸಮಯಕ್ಕೆ ಕಟಾವಿಗೆ ಬರುತ್ತದೆ. (ಸೆಪ್ಟಂಬರ್ – ಅಕ್ಟೋಬರ್ ನಿಂದ ಡಿಸೆಂಬರ್ – ಜನವರಿ) ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಇಳಿದು ಹೆಚ್ಚಿನ ನಷ್ಟವಾಗುತ್ತಿತ್ತು (ಬೆಲೆ ರೂ 5-25 ರೂ).

ತಂತ್ರಜ್ಞಾನದ ವಿವರ
ಕೆವಿಕೆಯು ಹೆಚ್ ಎ 4 ತಳಿಯ ಬೀಜೋತ್ಪಾದನೆಯನ್ನು 2013-14ರಲ್ಲಿ ಕೈಗೊಂಡಿತು. ಹೆಚ್ ಎ 4 ತಳಿಯು ವರ್ಷದ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದಾಗಿದೆ. ಈ ತಳಿಯು ಪೊದೆಯಾಕಾರವಾಗಿ ಬೆಳೆದು, ಕಡಿಮೆ ಅವಧಿಯ ತಳಿಯಾಗಿದೆ (90ದಿನ).

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಸಾಧನೆಗಳು
 • ಹೆಚ್ ಎ 4 ತಳಿಯು ಅಲ್ಪಾವಧಿ ತಳಿಯಾಗಿದ್ದು, ಸ್ಥಳೀಯ ತಳಿಗಿಂತ ಬೇಗ ಕಾಯಿ ಬಿಡಲಾರಂಭಿಸುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಅವಕಾಶವಾಗುತ್ತದೆ. ಅಷ್ಟಾದರೂ, ಏನಾದರು ಬೆಲೆ ಕುಸಿತವಾದರೆ, ಕಾಯಿಯನ್ನು ಒಣಗಿಸಿ ಬೀಜಕ್ಕೆ ಮಾರಾಟ ಮಾಡುವುದರಿಂದ, ಹೆಚ್ಚಿನ ಲಾಭವಾಗುತ್ತದೆಯೆಂದು ಕೆವಿಕೆಯು ರೈತರಿಗೆ ಪ್ರೋತ್ಸಾಹಿಸಿ ಯಶಸ್ವಿಯಾಯಿತು.
 • 10 ರೈತರಿಗೆ ಬೀಜೋತ್ಪಾದನೆ ಹಾಗು ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ನೀಡಿ ಬಿತ್ತನೆ ಬೀಜ ವಿತರಿಸಲಾಯಿತು
 • ಆ ಹಂಗಾಮಿನಲ್ಲಿ ಕೆಲವು ರೈತರು ಹಸಿ ಕಾಯಿಯನ್ನು ಹೆಕ್ಟೇರಿಗೆ 9 ಕ್ವಿ.ನಂತೆ ಇಳುವರಿ ಪಡೆದು ಸ್ಥಳೀಯ ತಳಿಗಳಿಗಿಂತ ಶೇ. 30 ರಷ್ಟು (3 ಕ್ವಿ/ಹೆ) ಪಡೆಯುವಲ್ಲಿ ಯಶಸ್ವಿಯಾದರು. ಅದೇ ಹಸಿ ಕಾಯಿಯನ್ನು ರೈತರು ಒಣಗಿಸಿ ಒಂದು ಕ್ವಿಂಟಾಲಿನಷ್ಟು ಕಾಳಾಗಿ ಪರಿವರ್ತಿಸಿದ್ದರೆ ಅವರಿಗೆ ಒಂದು ಕ್ವಿಂಟಾಲಿಗೆ 9000/- ರೂ ಬೆಲೆ ಸಿಗುತ್ತಿತ್ತು. ಅಂದರೆ 6 ಕ್ವಿಂಟಾಲ್ ಹಸಿ ಕಾಯಿಯನ್ನು ಮಾರಿ ಅವರು ರೂ. 12,000/- @ 2000/-ಕ್ವಿ ಪಡೆಯುವ ಬದಲು 6 ಕ್ವಿಂಟಾಲನ್ನು 2 ಕ್ವಿಂಟಾಲಿನಷ್ಟು ಕಾಳಾಗಿ ಮಾರಿದ್ದರೆ, 18000/- ರೂ ಲಾಭ ದೊರಕುವುದೆಂದು ರೈತರಿಗೆ ತಿಳಿಸಲಾಯಿತು.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 8000 ಹೆ ಪ್ರದೇಶದಲ್ಲಿ ಬಾಳೆ ಬೆಳೆಯನ್ನು ಬೆಳೆಯುತ್ತಾರೆ. ಅದರಲ್ಲಿ ಸುಮಾರು 4000 ಹೆ ಪ್ರದೇಶದಲ್ಲಿ ಏಲಕ್ಕಿ ಹಾಗು ಇನ್ನುಳಿದ 4000 ಹೆ ಪ್ರದೇಶ ಜಿ-9, ನೇಂದ್ರ ಹಾಗು ಬೇರೆ ತಳಿಗಳನ್ನು ಬೆಳೆಯಲಾಗುತ್ತದೆ. ಏಲಕ್ಕಿಯ ಸಂಭಾವ್ಯ ಇಳುವರಿ 45 ಟನ್ /ಹೆ ಇದೆ. ಆದರೆ ಜಿಲ್ಲೆಯ ಸರಾಸರಿ ಇಳುವರಿ 25 ಟನ್ /ಹೆ ಇದೆ. ಜಿ-9 ಸಂಭಾವ್ಯ ಇಳುವರಿ 120 ಟನ್/ಹೆ ಇದ್ದು ಜಿಲ್ಲೆಯ ಸರಾಸರಿ ಇಳುವರಿ 60 ಟನ್/ಹೆ.

ತಂತ್ರಜ್ಞಾನದ ವಿವರ
ಜಿ-9 ರಲ್ಲಿ ಕಡಿಮೆ ಇಳುವರಿ ಹಾಗು ಕಡಿಮೆ ಲಾಭ ಇದ್ದುದನ್ನು ಗಮನಿಸಿದ ಕೆವಿಕೆಯು ಅಧಿಕ ಸಾಂದ್ರತೆಯಲ್ಲಿ ಬಾಳೆಯನ್ನು ಬೆಳೆಯಲು ಪ್ರಾತ್ಯಕ್ಷಿಕೆಯ ಮೂಲಕ ರೈತರ ತಾಕಿನಲ್ಲಿ 2012-13, 2013-14, 2014-15 ಹಾಗು 2015-16ರಲ್ಲಿ ಸ್ಥಳೀಯ ಸಂಪನ್ಮೂಲಗಳಾದ ಮಣ್ಣು, ನೀರು, ಬೆಳಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಹಾಗು ಇನ್ನುಳಿದ ಅಗತ್ಯ ಒಳಸುರಿವುಗಳನ್ನು ಹಾಗು ಅವಶ್ಯಕತೆಯಿದ್ದರೆ ಮಾತ್ರ ರಾಸಾಯನಿಕಗಳ ಬಳಸಿ ಖರ್ಚು ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸುವಲ್ಲಿ ರೈತರಿಗೆ ತರಬೇತಿ ನೀಡಿತು.
ಈ ತಂತ್ರಜ್ಞಾನದಡಿಯಲ್ಲಿ ಬಾಳೆ ಬೆಳೆಯನ್ನು 2ಮೀ×1.2ಮೀ×1.2ಮೀ ಅಂತರದಲ್ಲಿ ಜೋಡಿ ಸಾಲಿನಲ್ಲಿ ಅಂಕುಡೊಂಕಾಗಿ ಗಿಡಗಳನ್ನು ನಾಟಿ ಮಾಡಿದುದ್ದರಿಂದ ಸುಮಾರು 5,200 ಗಿಡಗಳು/ಹೆ (ಜಿ-9 ತಳಿ) ಒಂದು ಹೆಕ್ಟೇರಿಗೆ ಸಾಕಾಗುತ್ತದೆ. ರೈತ ಪದ್ಧತಿಯಲ್ಲಿ 1.8 ಮೀ*1.8ಮೀ ನೆಡುವುದರಿಂದ ಒಂದು ಹೆಕ್ಟೇರಿಗೆ 3,085 ಗಿಡಗಳು ಕೂರುತ್ತವೆ. ಅದೇ ಅಧಿಕ ಸಾಂದ್ರತೆಯಲ್ಲಿ ಶೇ. 70 ರಷ್ಟು ಅಂದರೆ ಸುಮಾರು 2,115 ಹೆಚ್ಚಿನ ಗಿಡಗಳು ಕೂರುತ್ತವೆ. ಇದರಿಂದ 2,115 ಗಿಡಗಳಿಗೆ ಬೇಕಾಗುವ ರಾಸಾಯನಿಕ ಗೊಬ್ಬರಕ್ಕೆ ಹಾಗು ಹನಿ ನೀರಾವರಿ ಪೈಪುಗಳಿಗೆ ಸುಮಾರು ರೂ.84,600 ಹೆಚ್ಚಿನ ಖರ್ಚಾದರೂ ರೂ.9,900/ಹೆ.ಗೆ ನಿವ್ವಳ ಲಾಭವಾಗುತ್ತದೆ. ಇದರಿಂದ ರೈತ ಪದ್ಧತಿಯಲ್ಲಿ ಖರ್ಚು ರೂ. 2,45,771/- ಆದರೆ,ಅಧಿಕ ಸಾಂದ್ರತೆಯಲ್ಲಿ ಬಾಳೆ ಬೆಳೆದರೆ ಖರ್ಚು ರೂ 3,47,666/- (ಶೇ.41)ರಷ್ಟಾಗುತ್ತದೆ.

ತಂತ್ರಜ್ಞಾನದ ಮೂಲ: ಎನ್.ಆರ್.ಸಿ.ಬಿ., ತಿರುಚಿ

ಸಾಧನೆ
 • ಈ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು 4 ವರ್ಷಗಳಲ್ಲಿ 14 ರೈತರೊಂದಿಗೆ ಸುಮಾರು 8ಹೆ ಪ್ರದೇಶದಲ್ಲಿ ನಡೆಸಲಾಗಿದೆ. ಸರಾಸರಿ ಇಳುವರಿ 87.45 ಟನ್/ಹೆ ಇಳುವರಿ ಬಂದಿದ್ದು, ರೈತರ ತಾಕಿನಲ್ಲಿ 55.65 ಟನ್/ಹೆ ಬಂದಿದ್ದು, ಅಧಿಕ ಸಾಂದ್ರತೆಯಲ್ಲಿ ಶೇ. 57.14 ರಷ್ಟು ಹೆಚ್ಚಿನ ಇಳುವರಿ ಪಡೆಯಲಾಗಿದೆ. ಇದರಿಂದ ರೈತರಿಗೆ ರೂ. 1,98,036/-ಹೆ ಹೆಚ್ಚಿನ ಆದಾಯ ದೊರಕುತ್ತದೆ (ಶೇ.71.70 ರಷ್ಟು).
 • ಈ ತಂತ್ರಜ್ಞಾನದಲ್ಲಿ ಆಗುವ ಹೆಚ್ಚಿನ ಪ್ರಯೋಜನಗಳೆಂದರೆ, ಬಾಳೆ ಚಿಪ್ಪಿನ ತೂಕ ಹಾಗು ಗಾತ್ರ ಕಡಿಮೆಯಾಗಿ ಮಾರುಕಟ್ಟೆಯಲ್ಲಿಒಳ್ಳೆಯ ಬೆಲೆ ಸಿಗುವಂತಾಯಿತು. ಅಧಿಕ ಸಾಂದ್ರತೆಯಿಂದ ನೆರಳು ಹೆಚ್ಚಾಗಿ ಕಳೆ ಹತೋಟಿಗೆ ಬಂದು ಕಳೆ ನಿರ್ವಹಣೆ ಸುಲಭವಾಯಿತು.
 • ಈ ತಂತ್ರಜ್ಞಾನವನ್ನು 30 ರೈತರು ಮೈಸೂರು ಜಿಲ್ಲೆಯಲ್ಲಿ 20ಹೆ ಪ್ರದೇಶದಲ್ಲಿ ಅನುಸರಿಸುತ್ತಿದ್ದಾರೆ.
ಸಮಸ್ಯೆ
ಸುಮಾರು 10,000 ಹೆಕ್ಟೇರ್ ಪ್ರದೇಶದಲ್ಲಿ ಮೈಸೂರು ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಟೊಮಾಟೊ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ರೈತರು ಖಾಸಗಿ ಹೈಬ್ರೀಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಸರಿ ಸುಮಾರು ಪ್ರತಿ ಹೆಕ್ಟೇರ್ ಗೆ 40 ಟನ್ ನಷ್ಟು ಇಳುವರಿ ಪಡೆಯಲಾಗುತ್ತಿದೆ. ಇದಲ್ಲದೆ ಹಲವು ಕೀಟಗಳು, ರೋಗಗಳು, ಅಂಗಮಾರಿ ರೋಗಗಳು ಮುಖ್ಯ ಸಮಸ್ಯೆಯಾಗಿವೆ. ಕೀಟ ಮತ್ತು ರೋಗಗಳಿಂದ ಶೇ.20 ರಿಂದ 30 ರಷ್ಟು ಇಳುವರಿಯಲ್ಲಿ ಕುಂಠಿತವಾಗಿದೆ.

ತಂತ್ರಜ್ಞಾನದ ವಿವರ
ಆರ್ಕಾ ರಕ್ಷಕ್ ಹೈಬ್ರೀಡ್ನ್ನು ಕೆವಿಕೆಯಿಂದ ಪ್ರಾತ್ಯಕ್ಷಿಕೆ ಮಾಡಲಾಗಿದ್ದು, ಇದು ಟೊಮಾಟೊ ಎಲೆ ಮುದುಡುವ ವೈರಸ್, ಬ್ಯಾಕ್ಟೇರಿಯಲ್ ವಿಲ್ಟ್ ಮತ್ತು ಅಂಗಮಾರಿ ರೋಗಗಳನ್ನು ತಡೆದಿಟ್ಟುಕೊಳ್ಳುವ ಶಕ್ತಿ ಹೊಂದಿದೆ. ಹಣ್ಣುಗಳು ಗಟ್ಟಿಯಾಗಿದ್ದು ಬೇಗ ಹಾಳಾಗದಿರುವ ಗುಣ ಹೊಂದಿವೆ ಮತ್ತು ದೂರದ ಸ್ಥಳಗಳಿಗೆ ಸಾಗಿಸಲು ಸೂಕ್ತವಾಗಿವೆ.

ತಂತ್ರಜ್ಞಾನ ಮೂಲ:
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಾಧನೆಗಳು
 • ಈ ತಂತ್ರಜ್ಞಾನವನ್ನು 2013-14 ಮತ್ತು 2014-15 ರಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ 19 ರೈತರಲ್ಲಿ ಪ್ರಾತ್ಯಕ್ಷಿಕೆ ಮಾಡಲಾಯಿತು.
 • ಕೀಟ ಮತ್ತು ರೋಗಗಳ ಬಾಧೆಯು ಬೇರೆ ತಾಕು (ಜಮೀನು) ಗಳಿಗೆ ಹೋಲಿಸಿದರೆ ಶೇ.10 ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಸರಿಸುಮಾರು ಪ್ರತಿ ಹೆಕ್ಟೇರ್ ಗೆ 61 ಟನ್ ಇಳುವರಿ ಬಂದರೆ ಬೇರೆ ತಾಕುಗಳಲ್ಲಿ ಪ್ರತಿ ಹೆಕ್ಟೇರ್ ಗೆ 44 ಟನ್ ಇಳುವರಿ ಬಂದಿದೆ. ತಂತ್ರಜ್ಞಾನ ಅಳವಡಿಸಿಕೊಂಡ ತಾಕುಗಳಿಂದ ಪ್ರತಿ ಹೆಕ್ಟೇರ್ ಗೆ ರೂ. 1,24,000/- ನಿವ್ವಳ ಲಾಭ ಬಂದರೆ ರೂ.75, 000/- ಗಳ ನಿವ್ವಳ ಲಾಭವು ಬೇರೆ ತಾಕುಗಳಲ್ಲಿ ಕಂಡುಬಂದಿದೆ. ಆರ್ಕಾ ರಕ್ಷಕ್ ಹೈಬ್ರೀಡ್ ಮೈಸೂರು ಜಿಲ್ಲೆಯಲ್ಲಿ ಚಿರಪರಿಚಿತವಾಗಿದ್ದು, ಕೆವಿಕೆಯಿಂದ 30 ಹೆಕ್ಟೇರ್ ಪ್ರದೇಶದ 50 ರೈತರುಗಳಿಗೆ ಪ್ರತಿ ವರ್ಷ ಬೀಜಗಳನ್ನು ಪೂರೈಸಲಾಗುತ್ತಿದೆ.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, ಕೀಟ ಮತ್ತು ರೋಗಗಳಿಂದಾಗಿ ಶೇ. 50 ರಷ್ಟು ಇಳುವರಿ ಕುಂಠಿತವಾಗುತ್ತಿದೆ.ಅಂಗಮಾರಿ, ಉದ್ಭತ್ತ ಮತ್ತು ಎಲೆಕವಚ ರೋಗಗಳು ಶೇ. 33 ರಷ್ಟು ಇಳುವರಿ ಕುಂಠಿತವಾಗಲು ಕಾರಣವಾಗಿವೆ. ಕೇವಲ ಅಂಗಮಾರಿ ರೋಗದಿಂದ ಶೇ.22 ರಷ್ಟು ಇಳುವರಿ ಕುಂಠಿತವಾಗಿದ್ದು, ಈ ರೋಗವನ್ನು ತಡೆಯಲು ರೈತರು ಬೀಜೋಪಚಾರವನ್ನು ಅನುಸರಿಸುತ್ತಿದ್ದಾರೆ.

ತಂತ್ರಜ್ಞಾನದ ವಿವರ
ಈ ತಂತ್ರಜ್ಞಾನವನ್ನು 2013-14 ಮತ್ತು 2014-15 ರಲ್ಲಿ 10 ರೈತರ ಜೊತೆ 5 ಹೆಕ್ಟೇರ್ ಪ್ರದೇಶದಲ್ಲಿ ಪರಶೀಲಿಸಲಾಗಿದೆ. 4 ಗ್ರಾಂ ಸಂಯುಕ್ತ ಉತ್ಪನ್ನವನ್ನು (ಕಾರ್ಬೆಂಡೈಜಿಯಂ 25% + ಮ್ಯಾಂಕೊಜೆಬ್ 50%) 1 ಕೆಜಿ ಬೀಜಗಳಿಗೆ ಮಿಶ್ರಮಾಡಿ ಬೀಜೋಪಚಾರ ಮಾಡುವುದು ಮತ್ತು ಒಂದು ಲೀಟರ್ ನೀರಿಗೆ 0.6 ಗ್ರಾಂನಷ್ಟು ಟ್ರೈಸೈಕ್ಲೊಜೋಲ್ ನ್ನು ಗರಿಎಲೆ ಹೊರಗೆ ಬರುವ ಹಂತದಲ್ಲಿ ಸಿಂಪರಣೆ ಮಾಡುವುದು. ರೋಗದ ಬಾಧೆಯ ಶೇಕಡಾ ಪ್ರಮಾಣವನ್ನು ನರ್ಸರಿ ಹಂತ (ಬಿತ್ತನೆಯಾದ 20 ದಿನಗಳ ನಂತರ), ನಾಟಿಯಾದ 30ದಿನಗಳು, 60ದಿನಗಳು ಮತ್ತು 90 ದಿನಗಳ ನಂತರ ದಾಖಲಿಸುವುದು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ಸಾಧನೆಗಳು
ಸಂಯುಕ್ತ ಉತ್ಪನ್ನದಿಂದ (ಕಾರ್ಬೆಂಡೈಜಿಯಂ 25% + ಮ್ಯಾಂಕೊಜೆಬ್ 50%) ಬೀಜಗಳಿಗೆ ಮಿಶ್ರಮಾಡಿ ಬೀಜೋಪಚಾರ ಮಾಡುವುದರಿಂದ ಅಂಗಮಾರಿ ರೋಗದ ಬಾಧೆಯು ಕಡಿಮೆ ಪ್ರಮಾಣದಲ್ಲಿ ದಾಖಲಾಯಿತು. ರೋಗ ಮತ್ತು ಕೀಟ ಬಾಧೆಯು ಶೇ. 1.52ರಷ್ಟು ಮತ್ತು 52.93 ಕ್ವಿಂಟಾಲ್/ಹೆಕ್ಟೇರ್ ಇಳುವರಿ ಬಂದರೆ ಟ್ರೈಸೈಕ್ಲಜೋಲ್ ಸಿಂಪರಣೆಯಿಂದ ರೋಗ ಮತ್ತು ಕೀಟ ಬಾಧೆಯು ಶೇ.7.37 ಮತ್ತು 49.39 ಕ್ವಿಂಟಾಲ್/ ಹೆಕ್ಟೇರ್ ಗೆ ಇಳುವರಿ ಬಂದಿದೆ. ಯಾವುದೇ ಬೀಜೋಪಚಾರವಿಲ್ಲದೆ ರೋಗ ಮತ್ತು ಕೀಟ ಬಾಧೆಯು ಶೇ.13.27 ಮತ್ತು 44.90 ಕ್ವಿಂಟಾಲ್/ ಹೆಕ್ಟೇರ್ ಗೆ ಇಳುವರಿ ಬಂದಿದೆ. ಬೀಜೋಪಚಾರದಿಂದ ಸಿಂಪರಣಾ ಸಂಖ್ಯೆ 3 ಕ್ಕೆ ಕಡಿಮೆಯಾಗಿ ಉತ್ಪಾದನಾ ವೆಚ್ಚದಲ್ಲಿ ಪ್ರತಿ ಹೆಕ್ಟೇರ್ ಗೆ ರೂ.3708/- ಉಳಿತಾಯವಾಯಿತು.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 10000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಟೊಮಾಟೊ ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿದೆ. ಅತಿಯಾದ ಕೀಟನಾಶಕಗಳ ಬಳಕೆ, ಸಮಗ್ರ ಬೆಳೆ ನಿರ್ವಹಣೆ ಮಾಡದಿರುವುದು ಮತ್ತು ರಸ ಹೀರುವ ಕೀಟ ಮತ್ತು ರೋಗಗಳ ಬಗ್ಗೆ ತಿಳುವಳಿಕೆಯಿಲ್ಲದಿರುವುದರಿಂದ ಶೇ. 30 ರಷ್ಟು ಇಳುವರಿ ಕುಂಠಿತವಾಗಿದೆ.

ತಂತ್ರಜ್ಞಾನದ ವಿವರ
ಈ ತಂತ್ರಜ್ಞಾನವನ್ನು 2012-13ರಲ್ಲಿ ಪ್ರಾರಂಭಿಸಿ 2014-15ರವರೆಗೆ ಸುಮಾರು 20 ರೈತರ 10 ಹೆ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲಾಯಿತು. ಇದರಲ್ಲಿ ಆಕರ್ಷಕ ಬೆಳೆಯಾಗಿ ಚಂಡು ಹೂವಿನ ಸಾಲನ್ನು (1:16) ಅನುಪಾತದಲ್ಲಿ, ಬೀಜೋಪಚಾರವನ್ನು ಟ್ರೈಕೋಡರ್ಮದಿಂದ ಮಾಡಲಾಗಿದ್ದು, ಹಳದಿ ಹಾಗು ನೀಲಿ ಅಂಟು ಬಲೆ ಬಳಕೆ, ಕಾಯಿಕೊರಕದ ಹತೋಟಿಗೆ ಲಿಂಗಾಕರ್ಷಕ ಬಲೆ ಬಳಕೆ ಮಾಡಲಾಗಿದೆ. ಅದಲ್ಲದೆ, ಟ್ರೈಕೋಕಾರ್ಡ್, ಎನ್ ಪಿ ವಿ ಸಿಂಪರಣೆ, ಅಗತ್ಯವಿದ್ದರೆ ಮಾತ್ರ ರಸ ಹೀರುವ ಕೀಟಗಳಾದ (ಥ್ರಿಪ್ಸ್ , ಬಿಳಿನೊಣ, ಮೈಟ್ ), ಕಾಯಿಕೊರಕ ಹಾಗು ರೋಗಗಳಾದ ಸೊರಗು ರೋಗ, ಮೊದಲ ಹಾಗು ನಂತರ ಹಂತದಲ್ಲಿ ಕಾಡುವ ಅಂಗಮಾರಿ ರೋಗಗಳ ಹತೋಟಿಗೆ ರಾಸಾಯನಿಕ ಸಿಂಪರಣೆ ಮಾಡಲಾಗಿದೆ. ಈ ಸಮಗ್ರ ನಿರ್ವಹಣೆ ಪದ್ಧತಿಯಲ್ಲಿ ಹಲವು ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ.

ತಂತ್ರಜ್ಞಾನ ಮೂಲ:
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಾಧನೆಗಳು
  ಟೊಮೊಟೊ ನಾಟಿಯಾದ 30, 60, 90 ಮತ್ತು 120 ದಿನಗಳ ನಂತರದಲ್ಲಿ ಕೀಟ ಮತ್ತು ರೋಗ ದಾಖಲು ಮಾಡಲಾಗಿದೆ. ರಸ ಹೀರುವ ಕೀಟದ ಬಾಧೆಯು ಪ್ರತಿಶತ18 ರಷ್ಟು ಪ್ರಯೋಗದ ತಾಕಿನಲ್ಲಿ ಕಡಿಮೆಯಿದ್ದು, ರೈತಪದ್ಧತಿಯಲ್ಲಿ ಪ್ರತಿಶತ 31.50 ಕಂಡು ಬಂದಿದೆ. ಪ್ರಯೋಗದ ತಾಕಿನಲ್ಲಿ ಅಂಗಮಾಗಿ ರೋಗವು 42.30 ಪ್ರತಿಶತದಷ್ಟು ಇದ್ದು ರೈತಪದ್ಧತಿಗಿಂತ ಕಡಿಮೆಯಿದೆ( 49.40%). ಇಳುವರಿ 43.75 ಪ್ರತಿಶತದಷ್ಟು ಹೆಚ್ಚಾಗಿದೆ. ಸಮಯಕ್ಕೆ ಸರಿಯಾಗಿ ಟ್ರೈಕೊಕಾರ್ಡ್, ಹೆಲಿಲ್ಯೂರ್ ಮತ್ತು ಅಂಟು ಬಲೆ ಜೊತೆಗೆ ಲಿಂಗಾರ್ಷಕ ಬಲೆ ಅಳವಡಿಸುವುದರ ಮೂಲಕ ಕಾಯಿ ಕೊರಕವನ್ನು ಮತ್ತು ರಸಹೀರುವ ಕೀಟವನ್ನು ಕಡಿಮೆ ಮಾಡಬಹುದು.
 • ಈ ಪರಿಸರ ಸ್ನೇಹಿ ಪದ್ದತಿಗಳ ಮುಖಾಂತರ ಪ್ರತಿ ಹೆಕ್ಟೇರ್ ಗೆ ಸುಮಾರು 32 ಟನ್ ಬದಲಾಗಿ 46 ಟನ್ ಟೊಮಾಟೊವನ್ನು ಕೊಯ್ಲು ಮಾಡಲಾಗಿದೆ (ಶೇ. 43.75 ರಷ್ಟು ಹೆಚ್ಚಿನ ಇಳುವರಿ). ಪ್ರತಿ ಹೆಕ್ಟೇರ್ ಗೆ ರೂ.48,933 ಗಳಂತೆ ನಿವ್ವಳ ಲಾಭವನ್ನು ಪಡೆಯಬಹುದು.
 • 2 ವರ್ಷಗಳ ಪ್ರಾತ್ಯಕ್ಷಿಕೆ ತರಬೇತಿಗಳ, ಕೃಷಿ ಸಲಹೆಗಳು ಮತ್ತು ಜಾಗೃತಿಯ ಕಾರ್ಯಕ್ರಮಗಳ ಫಲವಾಗಿ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತದಿಂದ ರೈತರು ಈ ಪರಿಸರ ಸ್ನೇಹಿ ಪದ್ಧತಿಗಳನ್ನು ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರಿಸಿ ಕೊಂಡಿದ್ದಾರೆ.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 10,000ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮೆಣಸಿನಕಾಯಿಯು ತೋಟಗಾರಿಕಾ ಬೆಳೆಗಳಲ್ಲಿ ಮುಖ್ಯವಾದ ಬೆಳೆಯಾಗಿದೆ. ಅತಿಯಾದ ಕೀಟನಾಶಕಗಳ ಬಳಕೆಯಿಂದ ಸಮಗ್ರ ಬೆಳೆ ನಿರ್ವಹಣೆಯನ್ನು ಅಳವಡಿಸಿಕೊಳ್ಳದೆಯಿರುವುದರಿಂದ, ಜೊತೆಗೆ ರಸಹೀರುವ ಕೀಟಗಳು ಹಾಗೂ ರೋಗದ ಬಗ್ಗೆ ತಿಳುವಳಿಕೆಯಿಲ್ಲದಿರುವುದರಿಂದ ಶೇ. 20-25 ರಷ್ಟು ಇಳುವರಿ ಕುಂಠಿತವಾಗಿದೆ.

ತಂತ್ರಜ್ಞಾನದ ವಿವರ
2014-15 ರಲ್ಲಿ ಈ ತಂತ್ರಜ್ಞಾದ ಪ್ರಾತ್ಯಕ್ಷಿಕೆ ಮಾಡಲಾಗಿದ್ದು, 10 ಹೆಕ್ಟೇರ್ ಪ್ರದೇಶದಲ್ಲಿ 25 ರೈತರೊಂದಿಗೆ 2015-16 ರಲ್ಲಿ ಮುಂದುವರೆಸಲಾಯಿತು, ಬೇವಿನ ಹಿಂಡಿ, ಟ್ರೈಕೊಡರ್ಮ, ಅಂಟು ಬಲೆ (ಹಳದಿ ಮತ್ತು ನೀಲಿ) ಲಿಂಗಾಕರ್ಷಕ ಬಲೆ ಬಳಕೆ, ಬೇವಿನ ಎಣ್ಣೆ ಸಿಂಪರಣೆ ಮತ್ತು ಅವಶ್ಯಕತೆಗನುಗುಣವಾಗಿ ಕೀಟನಾಶಕಗಳ ಸಿಂಪರಣೆ ಮಾಡುವ ಮೂಲಕ ನುಸಿ, ಬಿಳಿನೊಣ, ಕಾಯಿ ಕೊರಕ ಮತ್ತು ಕುತ್ತಿಗೆ ಕೊಳೆ ರೋಗ, ಹಣ್ಣು ಕೊಳೆ ರೋಗ ನಿಯಂತ್ರಿಸಬಹುದಾಗಿದೆ. ಈ ತಂತ್ರಜ್ಞಾನವು ಪರಿಸರ ಸ್ನೇಹಿಯಾಗಿದೆ.

ತಂತ್ರಜ್ಞಾನದ ಮೂಲ:
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಾಧನೆಗಳು
  ರಸ ಹೀರುವ ಕೀಟಗಳ ಸಂಖ್ಯೆ ಮತ್ತು ರೋಗ ಬಾಧೆಯು 30 ದಿನಗಳ ಅಂತರದಲ್ಲಿ ದಾಖಲು ಮಾಡಲಾಗಿದೆ. ರಸಹೀರುವ ಕೀಟಗಳ ಸಂಖ್ಯೆ ಮತ್ತು ಕಾಯಿ ಕೊರಕ ಬಾಧೆಯು ಕ್ರಮವಾಗಿ ಶೇ.30.46 ಮತ್ತು 1.59 ರಷ್ಟು ಕಡಿಮೆಯಾಗಿದೆ. ಅಂಟು ಬಲೆ (ಹಳದಿ ಮತ್ತು ನೀಲಿ) ಮತ್ತು ಬೇವಿನ ಎಣ್ಣೆ ಸಿಂಪರಣೆಯಿಂದ ರಸಹೀರುವ ಕೀಟಗಳ ಸಂಖ್ಯೆ ಕಡಿಮೆಯಾಗುವುದರ ಮೂಲಕ ರಾಸಾಯನಿಕದ ಸಿಂಪರಣೆ (3 ಬಾರಿ) ಯನ್ನು ಕಡಿಮೆ ಮಾಡಬಹುದು. ಪ್ರತಿ ಹೆಕ್ಟೇರಿಗೆ ಉತ್ಪಾದನಾ ವೆಚ್ಚದಲ್ಲಿ ರೂ. 5100/- ರೂಗಳ ಉಳಿತಾಯವಾಗಿದೆ.
 • ರೈತರ ಜಮೀನುಗಳಲ್ಲಿ ಪ್ರತಿ ಹೆಕ್ಟೇರಿಗೆ 12.22 ಟನ್ ನಷ್ಟು ಹಸಿ ಮೆಣಸಿನಕಾಯಿಯನ್ನು ಕೊಯ್ಲು ಮಾಡಿದರೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸುಮಾರು 15.10 ಟನ್ ನಷ್ಟು ಹಸಿ ಮೆಣಸಿನಕಾಯಿಯನ್ನು ಕೊಯ್ಲು ಮಾಡಬಹುದು. ಶೇ. 16.10 ರಷ್ಟು ಹೆಚ್ಚಿನ ಇಳುವರಿ ಪಡೆಯುವುದರ ಮೂಲಕ ಪ್ರತಿ ಹೆಕ್ಟೇರಿಗೆ ರೂ. 26,322/- ನಿವ್ವಳ ಲಾಭ ಪಡೆಯಬಹುದು.
 • 2 ವರ್ಷಗಳ ಪ್ರಾತ್ಯಕ್ಷಿಕೆ, ತರಬೇತಿ, ಕೃಷಿ ಸಲಹೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಫಲವಾಗಿ ಈ ತಂತ್ರಜ್ಞಾನವು ಮೈಸೂರು ಜಿಲ್ಲೆಯಲ್ಲಿ 1,250 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರಗೊಂಡಿದ್ದು, ರಾಸಾಯನಿಕದ ಸಿಂಪರಣಾ ಸಂಖ್ಯೆ ಕಡಿಮೆಯಾಗಿದೆ. ಅಂಟು ಬಲೆಗಳನ್ನು ಬೆಳೆಯ ಪ್ರಾಥಮಿಕ ಹಂತದಲ್ಲೇ ಅಳವಡಿಸುವುದರಿಂದ ಮತ್ತು ಸಮಯಕ್ಕೆ ಸರಿಯಾಗಿ ಬೇವಿನ ಎಣ್ಣೆಯನ್ನು ಸಿಂಪರಣೆ ಮಾಡುವುದರಿಂದ, ರಾಸಾಯನಿಕ ಸಿಂಪರಣೆ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬದನೆಯು ಜಿಲ್ಲೆಯ ಮತ್ತೊಂದು ಪ್ರಮುಖ ಬೆಳೆಯಾಗಿದೆ. ಅತಿಯಾದ ಕೀಟನಾಶಕಗಳ ಬಳಕೆ, ಸಮಗ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳದಿರುವುದು ಮತ್ತು ಕಾಂಡ ಹಾಗೂ ಕಾಯಿ ಕೊರಕವನ್ನು ನಿರ್ವಹಣೆ ಮಾಡುವ ತಿಳುವಳಿಕೆಯಿಲ್ಲದಿರುವುದರಿಂದ ಇಳುವರಿಯಲ್ಲಿ ಶೇ.30 ರಷ್ಟು ಕುಂಠಿತವಾಗುವುದು.

ತಂತ್ರಜ್ಞಾನದ ವಿವರ
2016-17 ರಲ್ಲಿ ಈ ತಂತ್ರಜ್ಞಾನವನ್ನು ಪ್ರಾರಂಭಮಾಡಿದ್ದು, 2017-18 ರಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ 20 ರೈತರೊಂದಿಗೆ ಪ್ರಾತ್ಯಕ್ಷಿಕೆ ಮಾಡಲಾಗಿದ್ದು, ನಾಟಿ ಮಾಡಿದ 25 ದಿನದ ನಂತರ ನೀರಿನ ಬಲೆ ಜೊತೆಗೆ ಮೋಹಕ ಬಲೆಯಲ್ಲಿ ಲುಸಿನ್ ಲ್ಯೂರ್ ಬಳಕೆ (6 ಟ್ರ್ಯಾಪ್ಸ್ ಪ್ರತಿ ಎಕರೆಗೆ ) ಟ್ರೈಕೊಗ್ರಾಮಾ ಪ್ರತಿ ಎಕರೆಗೆ 60000/ವಾರಕ್ಕೊಮ್ಮೆ, ಕಾಂಡ ಮತ್ತು ಕಾಯಿ ಕೊರಕದ ಬಾಧೆ ತಡೆಯಲು 2 ಬಾರಿ ಬೇವಿನ ಎಣ್ಣೆ ಮತ್ತು 2 ಬಾರಿ ಬಿಟಿ ಫಾರ್ಮುಲೇಶನ್ ಬಳಕೆ ಮಾಡಲಾಗಿದೆ. ಈ ತಂತ್ರಜ್ಞಾನವು ಪರಿಸರ ಸ್ನೇಹಿ ಯಾಗಿದೆ.

ತಂತ್ರಜ್ಞಾನ ಮೂಲ:
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಾಧನೆಗಳು
 • ಕಾಂಡ ಮತ್ತು ಕಾಯಿ ಕೊರಕದ ಬಾಧೆಯನ್ನು ಪ್ರತಿ ಕೊಯ್ಲಿಗೂ ಮೊದಲು ದಾಖಲು ಮಾಡಲಾಗಿದೆ. ಪ್ರತಿ ಹೆಕ್ಟೇರ್ ಗೆ 10.8 ಕ್ವಿಂಟಾಲ್ ಬಾಧಿತ ಕಾಯಿಗಳನ್ನು ಪ್ರಾತ್ಯಕ್ಷಿಕೆ ತಾಕಿನಿಂದ ಸಂಗ್ರಹಿಸಿದರೆ, ರೈತ ಪದ್ಧತಿಯಲ್ಲಿ ಪ್ರತಿ ಹೆಕ್ಟೇರಿಗೆ 27.6 ಕ್ವಿಂಟಾಲ್ ಬಾಧಿತ ಕಾಯಿಗಳನ್ನು ಸಂಗ್ರಹಿಸಲಾಗಿದೆ. ಈ ತಂತ್ರಜ್ಞಾನ ಅಳವಡಿಸಿಕೊಂಡ ಪ್ರಾತ್ಯಕ್ಷಿಕೆ ತಾಕಿನಿಂದ ಪ್ರತಿ ಹೆಕ್ಟೇರ್ ಗೆ 482 ಕ್ವಿಂಟಾಲ್ ನಷ್ಟು ಉತ್ತಮ ಗುಣಮಟ್ಟದ ಬದನೆಯನ್ನು ಕೊಯ್ಲು ಮಾಡಿದರೆ ರೈತ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್ ಗೆ 335 ಕ್ವಿಂಟಾಲ್ ನಷ್ಟು ಕೊಯ್ಲು ಮಾಡಲಾಗಿದೆ.
 • 14 ಕೊಯ್ಲಿನ ಮಾಹಿತಿಯನ್ನು (ಅಂಕಿ ಅಂಶಗಳ) ಸಂಗ್ರಹಿಸಲಾಗಿದೆ. ಟ್ರೈಕೊಕಾರ್ಡ್ ಮತ್ತು ನೀರಿನ ಬಲೆ, ಮೋಹಕ ಬಲೆ (ಲ್ಯೂರ್)ಗಳನ್ನು ಸರಿಯಾದ ಸಮಯಕ್ಕೆ ಅಳವಡಿಸಿದ್ದರಿಂದ ಶೇ. 60.87 ರಷ್ಟು ಕಾಂಡ ಮತ್ತು ಕಾಯಿ ಕೊರಕದ ಪ್ರಮಾಣ ಕಡಿಮೆಯಾಗಿದೆ. ರಾಸಾಯನಿಕ ಸಿಂಪರಣೆ ರೈತರ ತಾಕಿಗಿಂತ ಪ್ರಾತ್ಯಕ್ಷಿಕಾ ತಾಕಿನಲ್ಲಿ 10 ಸಲ ಸಿಂಪರಣೆ ಕಡಿಮೆಯಾಗಿ ಪ್ರತಿ ಹೆಕ್ಟೇರ್ ಗೆ ರೂ.6325/- ಉಳಿತಾಯವಾಗಿದೆ.
 • ಈ ತಂತ್ರಜ್ಞಾನದ ಅಳವಡಿಕೆಯಿಂದ ಶೇ. 36.13 ರಷ್ಟು ಹೆಚ್ಚಿನ ಇಳುವರಿಯ ಜೊತೆಗೆ ಪ್ರತಿ ಹೆಕ್ಟೇರ್ ಗೆ ರೂ.1,96,328/- ಗಳನ್ನು ನಿವ್ವಳ ಲಾಭವು ದೊರೆತಿದೆ. 2 ವರ್ಷಗಳ ಪ್ರಾತ್ಯಕ್ಷಿಕೆ, ತರಬೇತಿ, ಕೃಷಿ ಸಲಹೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಫಲವಾಗಿ, ಈ ತಂತ್ರಜ್ಞಾನವು ಮೈಸೂರು ಜಿಲ್ಲೆಯಲ್ಲಿ50 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರಗೊಂಡಿದೆ ಮತ್ತು ರೈತರು ಟ್ರೈಕೊಕಾರ್ಡ್ ಬಳಸುವುದು ಹೆಚ್ಚಾಗಿದೆ.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ ಸುಮಾರು 50,000 ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿಯನ್ನು ಬೆಳಯಲಾಗುತ್ತಿದೆ. ಅತಿಯಾದ ಕೀಟನಾಶಕಗಳು, ಸಮಗ್ರ ಬೆಳೆ ನಿರ್ವಹಣೆ ಪದ್ಧತಿಯನ್ನು ಅಳವಡಿಸಿಕೊಳ್ಳದಿರುವುದು ಮತ್ತು ರಸಹೀರುವ ಕೀಟಗಳು, ನುಸಿ, ಬಿಳಿ ನೊಣ, ಹಿಟ್ಟು ತಿಗಣೆ, ಸಸ್ಯಹೇನು ಮತ್ತು ಕಾಂಡ ಕೊರೆಯುವ ಮೂತಿ ಹುಳ ಹಾಗು ರೋಗಗಳ ಬಗ್ಗೆ ತಿಳುವಳಿಕೆಯಿಲ್ಲದಿರುವುದರಿಂದ ಶೇ.30ರಷ್ಟು ಇಳುವರಿ ಕುಂಠಿತವಾಗಿರುವುದು ಕಂಡುಬಂದಿದೆ.

ತಂತ್ರಜ್ಞಾನದ ವಿವರ
ಈ ತಂತ್ರಜ್ಞಾನವನ್ನು 2016-17 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2017-18 ರಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ 22 ರೈತರೊಂದಿಗೆ ಪುನರಾವರ್ತಿಸಲಾಯಿತು. ಬೇವಿನ ಎಣ್ಣೆ ಬಳಕೆ, ಬೀಜೋಪಚಾರ ಮತ್ತು ಟ್ರೈಕೊಡರ್ಮದ ಬಳಕೆಯಿಂದ, ಹಳದಿ ಹಾಗೂ ನೀಲಿ ಅಂಟು ಬಲೆಗಳ ಅಳವಡಿಕೆ, ಬೇವಿನ ಎಣ್ಣೆ ಸಿಂಪರಣೆ (ಪ್ರತಿ ಲೀಟರ್ ನೀರಿಗೆ 3 ಮಿಲಿ) ಮತ್ತು ರಸ ಹೀರುವ ಕೀಟಗಳ ಬಾಧೆಯನ್ನು ನಿರ್ವಹಿಸಲು ಅವಶ್ಯಕತೆಗನುಗುಣವಾಗಿ ಕೀಟನಾಶಕಗಳ ಸಿಂಪರಣೆ ಮಾಡುವುದು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಧಾರವಾಡ

ಸಾಧನೆಗಳು
 • 30 ದಿನಗಳ ಅಂತರದಲ್ಲಿ ಅಂದರೆ 30, 60, 90 ಮತ್ತು 120 ದಿನಗಳ ಅಂತರದಲ್ಲಿ ರಸ ಹೀರುವ ಕೀಟಗಳ ಬಾಧೆಯನ್ನು ದಾಖಲಿಸಲಾಗಿದೆ. ನುಸಿ, ಬಿಳಿ ನೊಣ ಮತ್ತು ಸಸ್ಯ ಹೇನುಗಳು ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಂಡವು ಅಂದರೆ ಕ್ರಮವಾಗಿ 5.04, 5.25 (ಸಂಖ್ಯೆ) ಮತ್ತು ಶೇ.19.84. ಆದರೆ ರೈತ ಪದ್ಧತಿಯಲ್ಲಿ ನುಸಿ, ಬಿಳಿ ನೊಣ ಮತ್ತು ಸಸ್ಯ ಹೇನುಗಳು ಕ್ರಮವಾಗಿ 6.25, 7.99 (ಸಂಖ್ಯೆ) ಮತ್ತು ಶೇ. 20.84 ರಷ್ಟು ಕಂಡುಬಂದಿದೆ. ಈ ತಂತ್ರಜ್ಞಾನದಿಂದ ರಾಸಾಯನಿಕದ ಸಿಂಪರಣೆಯು 6 ರಿಂದ 4 ಕ್ಕೆ ಕಡಿಮೆಯಾಗಿದೆ ಮತ್ತು ಇದರಿಂದ ಪ್ರತಿ ಹೆಕ್ಟೇರಿಗೆ ರೂ.3100/- ರಷ್ಟು ಉಳಿತಾಯವಾಗಿದೆ. ಹಳದಿ ಮತ್ತು ನೀಲಿ ಅಂಟು ಬಲೆಗಳನ್ನು ಮೊದಲು (ಬಿತ್ತನೆ ಮಾಡಿದ 25 ದಿನದ ನಂತರ) ಅಳವಡಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಬೇವಿನ ಎಣ್ಣೆ ಸಿಂಪರಣೆಯಿಂದ ಹತ್ತಿಯಲ್ಲಿ ರಸಹೀರುವ ಕೀಟಗಳು ಕಡಿಮೆಯಾಗಿವೆ.
 • ಈ ತಂತ್ರಜ್ಞಾನಗಳ ಬಳಕೆಯಿಂದ ಹತ್ತಿಯಲ್ಲಿ ಶೇ. 27.5 ರ ಹೆಚ್ಚುವರಿ ಇಳುವರಿ ಜೊತೆಗೆ ನಿವ್ವಳ ಲಾಭವು ಪ್ರತಿ ಹೆಕ್ಟೇರ್ ಗೆ ರೂ.35,588/- ಗಳನ್ನು ಪ್ರಾತ್ಯಕ್ಷಿಕೆ ತಾಕುಗಳಿಂದ ಪಡೆಯಲಾಗಿದೆ. ಸುಮಾರು ಪ್ರತಿ ಹೆಕ್ಟೇರ್ ಗೆ 14.96 ಕ್ವಿಂಟಾಲಿನಷ್ಟು ಕೊಯ್ಲು ಮಾಡಲಾಗಿದೆ. ಇತರೆ ತಾಕುಗಳಿಂದ ಪ್ರತಿ ಹೆಕ್ಟೇರ್ ಗೆ 11.73 ಕ್ವಿಂಟಾಲ್ ನಷ್ಟು ಇಳುವರಿ ಪಡೆಯಲಾಗಿದೆ.
 • 2 ವರ್ಷಗಳ ಪ್ರಾತ್ಯಕ್ಷಿಕೆ, ತರಬೇತಿ, ಕೃಷಿ ಸಲಹೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳು, ಗುಂಪು ಚರ್ಚೆಗಳು, ಅಂಟು ಬಲೆಗಳ ಪ್ರಾತ್ಯಕ್ಷಿಕೆಗಳು ಮತ್ತು ಇತರೆ ತಂತ್ರಜ್ಞಾನಗಳ ಫಲವಾಗಿ ಈ ತಂತ್ರಜ್ಞಾನವು ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆಗೊಂಡಿದೆ.
ಸಮಸ್ಯೆ
ಬುಡಕಟ್ಟು ಜನಾಂಗದ ಹಾಲುಣಿಸುವ ತಾಯಂದಿರಲ್ಲಿಅಪೌಷ್ಟಿಕತೆಯ ಕಾರಣ ಎದೆಹಾಲು ಕಡಿಮೆಯಾಗಿ ಮಗುವಿನಲ್ಲಿ ಅಪೌಷ್ಟಿಕತೆ ಕಂಡುಬರುವುದು. ಬುಡಕಟ್ಟು ಕುಟುಂಬಗಳಲ್ಲಿ ಸ್ಥಳಿಯವಾಗಿ ಸಿಗುವ ಪೌಷ್ಟಿಕ ಆಹಾರ ಮತ್ತು ಮಗುವಿನ ಆರೈಕೆಯ ಬಗ್ಗೆ ತೆಗೆದುಕೊಳ್ಳಬೇಕಾದ ಮುಖ್ಯವಾದ ಕಾಳಜಿ ಬಗ್ಗೆ ತಿಳುವಳಿಕೆಯಿಲ್ಲದಿರುವುದು ಕಾರಣವಾಗಿದೆ. 366 ಬುಡಕಟ್ಟು ಕುಟುಂಬಗಳು 3 ಪುನರ್ವಸತಿ ಕೇಂದ್ರಗಳಲ್ಲಿ ವಾಸವಾಗಿದ್ದು, ಒಂದು ಪುನರ್ವಸತಿ ಕೇಂದ್ರವು ಎಚ್.ಡಿ.ಕೋಟೆ ತಾಲ್ಲೂಕು ಮತ್ತು 2 ಕೇಂದ್ರಗಳು ಹುಣಸೂರು ತಾಲ್ಲೂಕಿನಲ್ಲಿವೆ. ಭಾರತೀಯ ವೈದ್ಯಕೀಯ ಅನುಸಂಧಾನ ಪರಿಷತ್ತಿನ ಪ್ರಕಾರ ಒಬ್ಬ ಮನುಷ್ಯನು ಒಂದು ದಿನಕ್ಕೆ 400 ಗ್ರಾಂ ನಷ್ಟು ಏಕದಳ ಧಾನ್ಯಗಳನ್ನು ಸೇವಿಸಬೇಕು. ರಾಷ್ಟ್ರದ ಸರಿಸುಮಾರು ಒಂದು ದಿನದಲ್ಲಿ ಒಬ್ಬ ಮನುಷ್ಯ 396 ಗ್ರಾಂಗಳಷ್ಟು ಸೇವಿಸಬೇಕು ಮತ್ತು ಮೈಸೂರು ಜಿಲ್ಲೆಯ ಬುಡಕಟ್ಟು ಜನಾಂಗದವರಲ್ಲಿ ಒಂದು ದಿನಕ್ಕೆ 160 ಗ್ರಾಂ ರಷ್ಟು ಏಕದಳ ಧಾನ್ಯಗಳ ಸೇವನೆಯಿದೆ.

ತಂತ್ರಜ್ಞಾನ ವಿವರ
ಈ ತಂತ್ರಜ್ಞಾನವನ್ನು 2015-16 ಮತ್ತು 2016-17 ರಲ್ಲಿ ಮೈಸೂರು ಜಿಲ್ಲೆಯ 2 ತಾಲ್ಲೂಕಿನ ಆಯ್ದ 57 ಬುಡಕಟ್ಟು ಜನಾಂಗದ ಹಾಲುಣಿಸುವ ತಾಯಂದಿರು ಮತ್ತು ಮಕ್ಕಳಲ್ಲಿ ಪ್ರಾತ್ಯಕ್ಷಿಕೆ ಮಾಡಲಾಯಿತು. ಕೆವಿಕೆಯು ಸ್ಥಳಿಯವಾಗಿ ಲಭ್ಯವಿರುವ ಕೆಂಪಕ್ಕಿಯನ್ನು ಒಂದು ದಿನಕ್ಕೆ 200 ಗ್ರಾಂಗಳಂತೆ 30 ದಿನಗಳ ವರೆಗೆ ನಂತರ 6 ತಿಂಗಳವರೆಗೆ ಗಂಜಿ ರೂಪದಲ್ಲಿ ಸೇವಿಸಲು ಸಲಹೆ ನೀಡಲಾಯಿತು (ಬೇಯಿಸಿದ ನಂತರ 600 ಗ್ರಾಂಗಳಷ್ಟಾಗುವುದು). ಇದರ ಜೊತೆಗೆ ಸ್ಥಳಿಯವಾಗಿ ಲಭ್ಯವಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಲು ಸಲಹೆ ನೀಡಲಾಯಿತು. ಕೆಂಪಕ್ಕಿಯು ಕಬ್ಬಿಣ, ಸತು, ಪಾಲಿಫಿನೈಲ್ಸ್ ಮತ್ತು ಆಂಟಿಆಕ್ಸಿಡೆಂಟಗಳ ಆಗರವಾಗಿದೆ. ಹಣ್ಣು ಮತ್ತು ತರಕಾರಿಗಳು ಅವಶ್ಯಕವಾದ ಜೀವಸತ್ವಗಳು, ಖನಿಜ ಲವಣಗಳು ಮತ್ತು ನಾರಿನಂಶವನ್ನು ನೀಡುವುದರ ಮೂಲಕ ತಾಯಿಯ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿವೆ.

ತಂತ್ರಜ್ಞಾನ ಮೂಲ:
ಕೃಷಿ ವಿಶ್ವ ವಿದ್ಯಾಲಯ, ಧಾರವಾಡ

ಸಾಧನೆಗಳು
 • ಈ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಿಂದ ಹಾಲುಣಿಸುವ ತಾಯಂದಿರಲ್ಲಿ ಹಿಮೋಗ್ಲೋಬಿನ್ ಪ್ರಮಾಣವು 9.83 ರಿಂದ 10.80 ಗ್ರಾಂ/ಡಿಎಲ್ (9.86%) ಮತ್ತು ದೇಹದ ತೂಕವು 41.69 ನಿಂದ 42.90 ಕೆಜಿ ಹೆಚ್ಚಾಗಿದೆ. ಹಾಲುಣಿಸಲು ತೆಗೆದುಕೊಳ್ಳುವ ಸಮಯವು ಹೆಚ್ಚಾಗಿದೆ ಅಂದರೆ 10 ರಿಂದ 19 ನಿಮಿಷವಾದರೆ ಮತ್ತು ಒಂದು ದಿನಕ್ಕೆ ಹಾಲುಣಿಸುವ ಸಂಖ್ಯೆ 18 ರಿಂದ 14ಕ್ಕೆ ಇಳಿಕೆಯಾಗಿದೆ.
 • ಮಗುವಿನ ಎತ್ತರವು 54.7 ರಿಂದ 60 ಸೆಂಮೀ (9.68%)ನಷ್ಟಾದರೆ ತೂಕವು 4.59 ರಿಂದ 5.37 ಕೆಜಿಯಷ್ಟು (24.83%) ಹೆಚ್ಚಾಗಿದೆ.
 • ಒಟ್ಟು 366 ಬುಡಕಟ್ಟು ಕುಟುಂಬಗಳಲ್ಲಿ 170 ಕುಟುಂಬಗಳು ಕೆಂಪಕ್ಕಿಯ ಸೇವನೆ ಮಾಡುತ್ತಿದ್ದು, 60 ಕುಟುಂಬಗಳು ಬುಡಕಟ್ಟು ಕುಟುಂಬಗಳ ಜೊತೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ (ಎನ್ ಜಿ ಒ) ಸಂಸ್ಥೆಗಳಿಗೆ ಕೆಂಪಕ್ಕಿಗಾಗಿ ಬೇಡಿಕೆಯಿಟ್ಟಿವೆ.
ಸಮಸ್ಯೆ
ಅಧಿಕ ಬೆಲೆ ಮತ್ತು ತಾಜಾ ತರಕಾರಿಗಳ ಅಲಭ್ಯತೆಯ ಕಾರಣ ಬುಡಕಟ್ಟು ಜನಾಂಗದವರಲ್ಲಿ ಕಡಿಮೆ ಪ್ರಮಾಣದ ತರಕಾರಿಗಳ ಸೇವನೆ ಕಂಡು ಬಂದಿದೆ. ಭಾರತೀಯ ವೈದ್ಯಕೀಯ ಅನುಸಂಧಾನ ಪರಿಷತ್ತಿನ ಪ್ರಕಾರ ಒಬ್ಬ ಮನುಷ್ಯ ಒಂದು ದಿನಕ್ಕೆ ಬಬ್ಬ ಮನುಷ್ಯನು 300 ಗ್ರಾಂಗಳಷ್ಟು ಸೇವನೆ ಮಾಡಬೇಕು. ಬುಡಕಟ್ಟು ಜನಾಂಗದವರಲ್ಲಿ ತರಕಾರಿಗಳ ಸೇವನೆಯು 12.50 ಗ್ರಾಂ ನಷ್ಟಿದೆ (ಕೇವಲ ಶೇ. 4.17)

ತಂತ್ರಜ್ಞಾನದ ವಿವರ
ಈ ತಂತ್ರಜ್ಞಾನವನ್ನು 2016-17 ಮತ್ತು 2017-18 ರಲ್ಲಿ 30 ಬುಡಕಟ್ಟು ಕುಟುಂಬಗಳು ಮತ್ತು 5 ಶಾಲೆಗಳಲ್ಲಿ ಪ್ರಾತ್ಯಕ್ಷಿಕೆ ಮಾಡಲಾಗಿತ್ತು. ಬುಡಕಟ್ಟು ಮಹಿಳೆಯರು ಮತ್ತು ಶಾಲೆಯ ಮಕ್ಕಳಿಗೆ ಪೌಷ್ಟಿಕಾಂಶಗಳ ಬಗ್ಗೆ ಮತ್ತು ಪೌಷ್ಟಿಕ ಕೈತೋಟ ನಿರ್ಮಾಣದ ಬಗ್ಗೆ ತರಬೇತಿ ನೀಡಲಾಯಿತು. 35 ಪೌಷ್ಟಿಕ ಕೈತೋಟಗಳನ್ನು ನಿರ್ಮಾಣ ಮಾಡಲಾಯಿತು. ಮಹಿಳೆಯರು ಮತ್ತು ಶಾಲೆಯ ಮಕ್ಕಳಿಂದ 10 ವಿವಿಧ ತರಕಾರಿಗಳನ್ನು 6 ತಿಂಗಳ ಅವಧಿಗೆ ಬೆಳೆಯಲಾಯಿತು.

ತಂತ್ರಜ್ಞಾನದ ಮೂಲ:
ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಸಾಧನೆಗಳು
 • ಈ ಪ್ರಾತ್ಯಕ್ಷಿಕೆಯಲ್ಲಿ 6 ತಿಂಗಳ ಅವಧಿಗೆ ಪ್ರತಿ 35 ಕುಟುಂಬಗಳಿಂದ 760 ಕೆಜಿ ತರಕಾರಿಗಳನ್ನು 0.001 ಹೆಕ್ಟೇರಿನಲ್ಲಿ ಕೊಯ್ಲು ಮಾಡಲಾಯಿತು. ಈ ಪ್ರಾತ್ಯಕ್ಷಿಕೆಯಿಂದ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 63.29 ಗ್ರಾಂಗಳಷ್ಟು ತರಕಾರಿ ದೊರೆಯಿತು (ಶೇ. 21.10 ರಷ್ಟು).
 • ಪೌಷ್ಟಿಕ ಕೈತೋಟದ ನಿರ್ಮಾಣದಿಂದ ತರಕಾರಿ ಖರೀದಿ ಹಣದಲ್ಲಿ ಉಳಿತಾಯವಾಯಿತು (ರೂ.8000/-). ಜೊತೆಗೆ ಮನೆಗೆ ಉಪಯೋಗಿಸಿ ಉಳಿದ ತರಕಾರಿಗಳನ್ನು ಮಾರಾಟ ಮಾಡಿ ರೂ.4800/- ರಷ್ಟು ಹಣವನ್ನು ರೈತರು ಉಳಿಸಿದಂತಾಯಿತು.
 • ಪ್ರಾತ್ಯಕ್ಷಿಕೆಯ ನಂತರ ಒಂದು ಶಾಲೆ ಮತ್ತು 5 ಕುಟುಂಬಗಳು (ಪೌಷ್ಟಿಕ ಕೈತೋಟ ಪ್ರಾತ್ಯಕ್ಷಿಕೆಯ ಶೇ. 25 ರಷ್ಟು) ತರಕಾರಿ ಬೆಳೆಯುವುದನ್ನು ಮುಂದುವರೆಸಿದ್ದು, ಒಂದು ವರ್ಷಕ್ಕೆ ಸುಮಾರು 1500 ಕೆಜಿಯಷ್ಟು ತರಕಾರಿಗಳನ್ನು ಕೊಯ್ಲು ಮಾಡುತ್ತಿದ್ದಾರೆ. ತಾವೇ ಸ್ವತಃ ತರಕಾರಿಗಳನ್ನು ಬೆಳೆದುಕೊಳ್ಳುವುದರಿಂದ ಪ್ರತಿದಿನ ತರಕಾರಿಗಳನ್ನು ಸೇವಿಸಲು ಆಸಕ್ತಿಯುಂಟಾಗುವುದು ಮತ್ತು ತರಕಾರಿಗಳನ್ನು ಕೊಳ್ಳಲು ತಗಲುವ ವೆಚ್ಚವು ಉಳಿತಾಯವಾಗುವುದು. ಮಕ್ಕಳಿಗೆ ಪೌಷ್ಟಿಕ ಕೈತೋಟ ನಿರ್ಮಾಣದ ಕೌಶಲ್ಯದ ಅನುಭವ ದೊರೆಯಲು ಅನುಕೂಲವಾಯಿತು.
ಸಮಸ್ಯೆ
ನಿಗದಿತ ಪ್ರಮಾಣದಲ್ಲಿ ನೀರು, ಆಹಾರ, ಹೂಳು ಹಾಗು ದೀರ್ಘಾವಧಿ ತೊಟ್ಟಿಗಳಲ್ಲಿ ಕಳೆ ನಿರ್ವಹಣೆ ತೊಂದರೆಯಿಂದ ಮೀನಿನ ಇಳುವರಿ ಕುಂಠಿತವಾಗಿದೆ. ಸ್ಥಳೀಯ ತಳಿಗಳನ್ನು ಹಾಗು ತೊಟ್ಟಿಗಳ ಸೂಕ್ತ ನಿರ್ವಹಣೆಯ ಕೊರತೆಯಿಂದ ಮೀನುಗಾರಿಕೆಯಲ್ಲಿ ಲಾಭ ಕಡಿಮೆಯಾಗಿದೆ.

ತಂತ್ರಜ್ಞಾನದ ವಿವರ
ಹೆಚ್ಚು ಬೇಗ ಬೆಳವಣಿಗೆಗೊಂಡು ಉತ್ತಮ ಇಳುವರಿ ಕೊಡುವ ಅಮುರ್ ಕಾರ್ಪ್ ನ್ನು ಪ್ರತ್ಯೇಕವಾಗಿ ಹಾಗು ಇತರೆ ತಳಿಗಳ ಜೊತೆಗೆ ಬೆಳೆಸಿ (ಕಾಟ್ಲ: ಜಯಂತಿ ರೋಹು: ಕಾಮನ್ ಕಾರ್ಪ್ 4:3:3) ನ್ನು 2014-15ರಲ್ಲಿ ಪ್ರಯೋಗ ನಡೆಸಲಾಯಿತು. ಸ್ಥಳೀಯ ಪದ್ಧತಿಗಿಂತ ಹೆಚ್ಚಿನ ಇಳುವರಿ ಪಡೆಯಬಹುದೆಂದು ರೈತರಿಗೆ ಮನದಟ್ಟು ಮಾಡಲು ರೈತರ ಸಹಭಾಗಿತ್ವದಲ್ಲಿ ಅಧ್ಯಯನ ನಡೆಸಲಾಯಿತು.

ಮೂಲ :
ಕೃಷಿ ವಿದ್ಯಾಲಯ, ಧಾರವಾಡ

ಸಾಧನೆ
 • ಪ್ರಾಯೋಗಿಕ ತೊಟ್ಟಿಯಲ್ಲಿ ಮೀನಿನ ಇಳುವರಿ 3,390 ಕೆಜಿ/ಹೆ ಬಂದಿದ್ದು, ರೈತ ಪದ್ಧತಿಯಲ್ಲಿ 2,064 ಕೆಜಿ/ಹೆಗೆ ಕೇವಲ ಕಾಮನ್ ಕಾರ್ಪ್ ನ್ನು ಪ್ರತ್ಯೇಕವಾಗಿ ಬೆಳೆಯುವುದರಿಂದ ಬಂದಿದೆ. ಈ ತಂತ್ರಜ್ಞಾನದ ಬಳಕೆಯಿಂದ ಶೇ. 64 ರಷ್ಟು ಹೆಚ್ಚಿನ ಇಳುವರಿ ಬಂದಿದೆ.
 • ಕಬಿನಿ ಜಲಾಶಯದ ಹಿನ್ನೀರಿನಲ್ಲಿ (ಹೆಚ್ ಡಿ ಕೋಟೆ) ಶೇ 18ರಷ್ಟು ರೈತರು ಅಮುರ್ ಕಾಮನ್ ಕಾರ್ಪ್ ನೊಂದಿಗೆ ವಿವಿಧ ಮಿಶ್ರ ತಳಿಗಳ ಮೀನು ಸಾಕಣೆಯನ್ನು ಮಾಡುತ್ತಿದ್ದಾರೆ.
ಸಮಸ್ಯೆ
ಮೈಸೂರು ಜಿಲ್ಲೆಯಲ್ಲಿ 10,450 ರಷ್ಟು ಮೀನುಗಾರರ ಕುಟುಂಬಗಳು ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೂ ಕೇವಲ ಮೀನುಗಾರಿಕೆ ಇಲಾಖೆಯಿಂದ ಮಾತ್ರ, ತತ್ತಿ, ಮೀನಿನ ಮರಿ ದೊರಕುತ್ತಿದ್ದು, ಗುಣಮಟ್ಟದ ಮರಿ, ತತ್ತಿ, ಆಹಾರದ ಕೊರತೆ ಹಾಗು ತೊಟ್ಟಿಗಳ ಕಳಪೆ ನಿರ್ವಹಣೆಯ ಫಲವಾಗಿ ಮೀನಿನ ಜೀವಿತಾವಧಿ ಹಾಗು ಮರಿಗಳ ತೂಕ ಕಡಿಮೆಯಾಗಿ ಒಟ್ಟಾರೆ ಇಳುವರಿಯಲ್ಲಿ ಕಡಿಮೆಯಾಗಿದೆ

Technology characteristics
ಈ ಪ್ರಯೋಗವನ್ನು 5 ರೈತರೊಂದಿಗೆ 2017-18ರಲ್ಲಿ ಮಾಡಲಾಯಿತು. ಮೀನಿನ ತೊಟ್ಟಿ ನಿರ್ವಹಣೆಯಲ್ಲಿ ಸಗಣಿ ಗೊಬ್ಬರ 2 ಟನ್/ಎಕರೆಗೆ 3 ಹಂತದಲ್ಲಿ ಕೊಡಬೇಕು. ಮೀನಿನ ತತ್ತಿಗಳು ಬಿಡುವ 15 ದಿನದ ಮುನ್ನ ಮೊದಲ ಬಾರಿ, ಮೀನಿನ ತತ್ತಿ ಬಿಟ್ಟ 2 ತಿಂಗಳಿಗೆ 2ನೇ ಬಾರಿ ಹಾಗು 3ನೇ ತಿಂಗಳಿಗೆ ಮೂರನೇ ಬಾರಿ ಕೊಡಬೇಕು. ಸಂಗ್ರಹಣಾ ತೊಟ್ಟಿಯಲ್ಲಿ ಮರಿ ಬಿಡುವ ಮುನ್ನ ಕಳೆಗಳನ್ನು ತೆಗೆಯಬೇಕು.
ನಿಗದಿತ ಸಂಗ್ರಹಣಾ ಸಾಂದ್ರತೆ ಮತ್ತು ಆಹಾರ ವೇಳಾಪಟ್ಟಿ- ಕಾಟ್ಲ ತತ್ತಿ (3 ದಿನದ ತತ್ತಿ) ಯನ್ನು 12ಲಕ್ಷದಷ್ಟು /ಎಕರೆಗೆ ಬಿಡಬೇಕು. ಜೊತೆಗೆ ಪೂರಕ ಆಹಾರವಾಗಿ ಕಡ್ಲೆ ಬೀಜದ ಹಿಂಡಿ ಪುಡಿ, ಅಕ್ಕಿ ತೌಡಿನ ಮಿಶ್ರಣ 1:1 ಅನುಪಾತದಲ್ಲಿ(ಶೇ 5ರಷ್ಟು ಮೀನಿನ ಮರಿಯ ತೂಕ) ದಿನಕ್ಕೆ 2 ಬಾರಿಯಂತೆ, ಅರ್ಧ ಬೆಳಿಗ್ಗೆ ಮತ್ತು ಅರ್ಧ ಸಂಜೆಯ ಹೊತ್ತಿಗೆ ಗಾಳಿ ಜೋರಾಗಿ ಬೀಸದ ಸಮಯದಲ್ಲಿ ನೀಡಬೇಕು.

ಮೂಲ :
ಕೆ.ವಿ.ಎ.ಎಫ್.ಎಸ್.ಯೂ, ಬಿದರ್

ಸಾಧನೆ
 • ಒಂದು ಎಕರೆಯಲ್ಲಿ 12 ಲಕ್ಷ ತತ್ತಿಗಳನ್ನು ಬಿಡಲಾಗಿದ್ದು, 75 ದಿನದ ನಂತರ 5.4 ಲಕ್ಷ ಮೀನಿನ ಮರಿಗಳು ಬದುಕುಳಿದಿದ್ದವು ಮತ್ತು ಮೀನಿನ ಮರಿಗಳ ಗಾತ್ರ 40 ಮಿಮಿ ರಿಂದ 100 ಮಿಮಿ ಉದ್ದವಾಗಿದ್ದು, ರೈತ ಪದ್ಧತಿಗಿಂತ ಹೆಚ್ಚಾಗಿದ್ದವು.
 • ಸರಾಸರಿ ಖರ್ಚು ರೂ. 92,700/- ಇದ್ದು, ರೂ.2,70,000/-ರಷ್ಟು ಆದಾಯವನ್ನು ಮೀನಿನ ಮರಿಯ ಮಾರಾಟದಿಂದ ಪಡೆದು, ನಿವ್ವಳ ಆದಾಯ ರೂ.1,77,300/-ರಷ್ಟು ಪಡೆದಿದ್ದು, ರೈತ ಪದ್ಧತಿಯಲ್ಲಿ 1,12,300/-ರಷ್ಟು ಹೆಚ್ಚಿನ ಲಾಭ ಪಡೆದಿದ್ದಾರೆ. ಶೇ.173ರಷ್ಟು ಆದಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 • 60 ರೈತರು ಉತ್ತಮ ಗುಣಮಟ್ಟದ ತತ್ತಿಗಳನ್ನು ಉತ್ಪಾದಿಸಲು ತರಬೇತಿ ಪಡೆದಿದ್ದು, ಅದರಲ್ಲಿ 15 ರೈತರು ಮೀನಿನ ಮರಿಗಳ ನಿರ್ವಹಣೆ ಮಾಡಲು ತರಬೇತಿ ಪಡೆದಿದ್ದಾರೆ.
ಸಮಸ್ಯೆ
ಬಾಳೆಯು ಮೈಸೂರು ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಸುಮಾರು 8000 ಹೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯ ಸರಾಸರಿ ಇಳುವರಿ 25 ಟನ್/ಹೆಗೆ ಇದೆ ಅಂದರೆ, ದೇಶದ ಸರಾಸರಿ ಇಳುವರಿ 45 ಟನ್ /ಹೆ (ಶೇ 44)ರಷ್ಟು ಇದೆ. ಫ್ಯುಸೇರಿಯಂ ಸೊರಗು ರೋಗ, ಎಲೆಚುಕ್ಕೆ ರೋಗ, ಮೂತಿ ಹುಳ ಹಾಗು ಬೇರು ಕೊರೆಯುವ ಹುಳ, ಏಕ ಬೆಳೆ ಪದ್ಧತಿ ಹಾಗು ದ್ವಿತೀಯ ಹಂತದ ಹಾಗು ಲಘು ಪೋಷಕಾಂಶಗಳ ಕೊರತೆ ಎಲ್ಲದರ ಕಾರಣದಿಂದ ಇಳುವರಿಯಲ್ಲಿ ಕುಂಠಿತವಾಗುತ್ತಿತ್ತು. ಇದನ್ನು ಗಮನಿಸಿದ ಕೆವಿಕೆಯು ಲಘು ಪೋಷಕಾಂಶಗಳ ಸಮ್ಮಿಶ್ರಣವಾದ ಬಾಳೆ ಸಮೃದ್ಧಿಯನ್ನು ಕೆವಿಕೆಯಲ್ಲಿ ಉತ್ಪಾದಿಸಿ ರೈತರಿಗೆ ಒದಗಿಸುವಲ್ಲಿ ಯಶಸ್ವಿಯಾಯಿತು.

ತಂತ್ರಜ್ಞಾನದ ವಿವರ
ಬಾಳೆ ಸಮೃದ್ಧಿಯು ಲಘು ಪೋಷಕಾಂಶಗಳ ಸಮ್ಮಿಶ್ರಣವಾಗಿದೆ. ಇದನ್ನು ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ, ಬಾಳೆ ಚಿಪ್ಪುಗಳ ಸಂಖ್ಯೆ ಹಾಗು ಹಣ್ಣಿನ ಗಾತ್ರದಲ್ಲಿ ಹೆಚ್ಚಳ ಕಂಡು ಒಟ್ಟಾರೆ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ. ಈ ಒಂದು ತಂತ್ರಜ್ಞಾನವನ್ನು ಕೆವಿಕೆಯು ಉತ್ಪಾದನೆ ಹಾಗು ಮಾರಾಟ ಮಾಡಲು ಐಐಹೆಚ್ಆರ್ ನಿಂದ ತರಬೇತಿ ಹಾಗು ಪರವಾನಗಿ ಪಡೆದು ಅಕ್ಟೋಬರ್ 2010ರಿಂದ ರೈತರಿಗೆ ಒದಗಿಸಲು ಪ್ರಾರಂಭಿಸಿತು.

ತಂತ್ರಜ್ಞಾನದ ಮೂಲ :
ಐಐಹೆಚ್ಆರ್, ಬೆಂಗಳೂರು.

ಸಾಧನೆಗಳು
 • ಕೆವಿಕೆಯು ಬಾಳೆ ಸಮೃದ್ಧಿಯನ್ನು ಜಿಲ್ಲೆಯಲ್ಲಿ ತಂತ್ರಜ್ಞಾನ ಪರಿಶೀಲನೆ ಹಾಗು ಮುಂಚೂಣಿ ಪ್ರಾತ್ಯಕ್ಷಿಕೆ ಹಾಗು ತರಬೇತಿಗಳ ಮುಖಾಂತರ ರೈತರಿಗೆ ಪರಿಚಯಿಸಿ ಈ ತಂತ್ರಜ್ಞಾನವನ್ನು ಹೆಚ್ಚು ಪ್ರಚಲಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
 • ಬಾಳೆ ಸಮೃದ್ಧಿಯನ್ನು ಬಳಸುವುದರಿಂದ ಗಿಡವು ಹೆಚ್ಚು ಆರೋಗ್ಯಕರವಾಗಿ ಬೆಳೆದು ಶೇ. 10ರಷ್ಟು ಇಳುವರಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
 • ಇದುವರೆಗೂ ಕೆವಿಕೆಯು 55478 ಕೆಜಿಯಷ್ಟು ಬಾಳೆ ಸಮೃದ್ಧಿಯನ್ನು ಉತ್ಪಾದಿಸಿ 4950 ರೈತರಿಗೆ ಒದಗಿಸಿ 2110ಹೆ ಪ್ರದೇಶದಲ್ಲಿ ಕಳೆದು 10 ವರ್ಷಗಳಿಂದ ಒದಗಿಸಲು ಕಾರಣವಾಗಿದೆ. ಕೆವಿಕೆಯ ಪ್ರಯತ್ನ ಹಾಗು ನಿರಂತರ ಸೇವೆಯಿಂದ ವರ್ಷದಿಂದ ವರ್ಷಕ್ಕೆ ಬಾಳೆ ಸಮೃದ್ಧಿಯನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸಮಸ್ಯೆ
ರೈತರು ಬೆಳೆಗೆ ಬೇಕಾಗುವ ಕೃಷಿ ಪರಿಕರಗಳಾದ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ, ರೋಗ ಹಾಗು ಕೀಟಗಳ ಹತೋಟಿಗೆ ವಿವಿಧ ಔಷಧಿಗಳ ಖರೀದಿಗೆ ಖಾಸಗಿ ಅಂಗಡಿಗಳ ಹೋಗಿ ಶೋಷಣೆಗೊಳಗಾಗಿ ಶೇ. 20-30ರಷ್ಟು ಹೆಚ್ಚಿಗೆ ವ್ಯಯಮಾಡುತ್ತಿದ್ದರು. ರೈತರು ಸಂಕಷ್ಟವನ್ನು ಗಮನಿಸಿದ ಕೆವಿಕೆಯು ರೈತರಿಗೆ ಸೇವೆ ಒದಗಿಸಿಕೊಡಲು ಅಗ್ರಿಕ್ಲಿನಿಕನ್ನು ಪ್ರಾರಂಭಿಸಿತು.

ತಂತ್ರಜ್ಞಾನದ ಮೂಲ :
ಸಿಡಿಬಿ, ಕೇರಳ

ಸಾಧನೆಗಳು
 • ಕೆವಿಕೆಯ ಒಂದು ಹೊಸ ಪರಿಕಲ್ಪನೆಯ ಆವಿಷ್ಕಾರವಾದ ಅಗ್ರಿಕ್ಲಿನಿಕ್ ಸೇವೆಯನ್ನು ತಜ್ಞರ ಸಲಹೆಯೊಂದಿಗೆ, ಔಷಧಿ ಹಾಗು ಇನ್ನಿತರ ಕೃಷಿ ಪರಿಕರಗಳ ಮಾರಾಟವನ್ನು ಸೂಕ್ತ ಬೆಲೆಗೆ ರೈತರಿಗೆ ಒದಗಿಸಲು 2013 ರಿಂದ ಪ್ರಾರಂಭಿಸಿತು.
 • ಅಗ್ರಿಕ್ಲಿನಿಕ್ ಒಂದು ಸಾಮಾಜಿಕ ಉದ್ಯಮವಾಗಿದ್ದು, ಇಲ್ಲಿ ತಜ್ಞರ ಸಲಹೆಯೊಂದಿಗೆ, ಉತ್ತಮ ಗುಣಮಟ್ಟದ ಔಷಧಿ ಹಾಗು ಇನ್ನಿತರ ಕೃಷಿ ಪರಿಕರಗಳ ಮಾರಾಟವನ್ನು, ಹಾಗು ನವೀನ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವ ಒಂದು ವೇದಿಕೆಯಾಗಿದೆ.
 • ಇದುವರೆಗೆ ಕೆವಿಕೆಯು 35685 ರೈತರಿಗೆ 30.06.2019 ರವರೆಗೆ ತನ್ನ ಸೇವೆಯನ್ನು ಒದಗಿಸಿದೆ. ಸರಾಸರಿ ದಿನಕ್ಕೆ 28 ರೈತರು ಅಗ್ರಿಕ್ಲಿನಿಕಿಗೆ ಭೇಟಿ ನೀಡಿ ಸಲಹೆ ಪಡೆಯುತ್ತಿದ್ದಾರೆ. ಇದರಿಂದ ಅಗ್ರಿಕ್ಲಿನಿಕಿನ ಸುತ್ತುನಿಧಿಯು 4.17 ಕೋಟಿಯನ್ನು ದಾಟಿದ್ದು, ಒಂದು ದಿನಕ್ಕೆ ರೂ. 20,600/- ರಷ್ಟು ವ್ಯವಹಾರ ನಡೆಸುತ್ತಿದೆ.
 • ಅಗ್ರಿಕ್ಲಿನಿಕ್ ಒಂದು ಬಹು ಬೇಡಿಕೆಯ ಮಾದರಿ ವಿಸ್ತರಣಾ ಚಟುವಟಿಕೆಯಾಗಿ ಹೊರಹೊಮ್ಮಿದೆ. ಇದರಡಿ ರೈತರು ತಜ್ಞರೊಂದಿಗೆ ಮುಖಾಮುಖಿಯಾಗಿ ಭೇಟಿಮಾಡಿ, ಬೆಳೆಗಳಲ್ಲಿ ಬೀಜೋಪಚಾರ, ಪೋಷಕಾಂಶಗಳ ನಿರ್ವಹಣೆ, ಕಳೆಗಳ ನಿರ್ವಹಣೆ, ರೋಗ ಕೀಟ ನಿರ್ವಹಣೆ, ಬೀಜೋತ್ಪಾದನೆ, ಕೊಯ್ಲೋತ್ತರ ಚಟುವಟಿಕೆಗಳ ಕುರಿತು ಸಲಹೆ ಪಡೆದು ಕೃಷಿ ಪರಿಕರಗಳನ್ನು ಖರೀದಿಸಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗಿದೆ.
ಸಮಸ್ಯೆ
ಬಹುತೇಕ ತೆಂಗು ಬೆಳೆಗಾರರು ತೆಂಗಿನ ಮರ ಹತ್ತುವ ಕೆಲಸಗಾರರ ಅಭಾವದಿಂದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದಲ್ಲದೆ ಸೂಕ್ತ ಮಾರ್ಗದರ್ಶನವಿಲ್ಲದೇ, ತೋಟದ ನಿರ್ವಹಣೆಯನ್ನು ಮಾಡಲಾಗದೆ, ಸುಮಾರು 10000 ಹೆ ಪ್ರದೇಶದಲ್ಲಿ ತೆಂಗಿನ ಇಳುವರಿ ಕುಂಠಿತವಾಗಲು ಮೂಲ ಕಾರಣವಾಗಿದೆ.

ಸಾಧನೆಗಳು
 • • ಕೆವಿಕೆ ಹಾಗು ತೆಂಗು ಅಭಿವೃದ್ಧಿ ಮಂಡಳಿ ಸಹಾಯದಿಂದ ರೈತರಿಗೆ ಮರ ಹತ್ತುವ ಯಂತ್ರವನ್ನು ಖರೀದಿಸಲು ಆರ್ಥಿಕ ಸಹಾಯದ ಜೊತೆಗೆ ಮರ ಹತ್ತುವ ತರಬೇತಿಯನ್ನು ಕೆವಿಕೆಯಲ್ಲಿ ಯುವ ಕೃಷಿಕರಿಗೆ 2014-15 ರಿಂದ 2016-17ರ ವರೆಗೆ ನಡೆಸಿತು
 • • ಕೆವಿಕೆಯು 3 ವರ್ಷದಲ್ಲಿ ಸುಮಾರು 450 ಯುವ ಕೃಷಿಕರಿಗೆ ತರಬೇತಿ ನೀಡಿದ್ದು, ಅದರಲ್ಲಿ ಸುಮಾರು 150 ಮಂದಿ ದಿನಕ್ಕೆ 750/-ರೂಪಾಯಿಗಳನ್ನು ತೆಂಗಿನ ಮರ ಹತ್ತುವ ಯಂತ್ರವನ್ನು ಬಳಸಿ ಕಾಯಿ ಕೀಳುವುದರಿಂದ ಹಾಗು ತೆಂಗಿನ ತೋಟದಲ್ಲಿ ಪೋಷಕಾಂಶ, ರೋಗ ಕೀಟ ನಿರ್ವಹಣೆ ಮಾಡಲು ಇತರ ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ
ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: