ಜೂನ್ ಮತ್ತು ಜುಲೈ 2021 ಕಾರ್ಯಕ್ರಮಗಳು


ವಿಶ್ವ ಕ್ಷೀರ ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಮೈಸೂರಿನ ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ 01.06.2021 ರಂದು ವಿಶ್ವೇ ಕ್ಷೀರ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬನ್ನೂರು ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಎಸ್. ರಾಜೇಶ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭಾರತದಲ್ಲಿ ನಡೆದ ಕ್ಷೀರ ಕ್ರಾಂತಿ, ಹಾಲಿನ ಮಹತ್ವ, ಮಕ್ಕಳ ಬೆಳವಣಿಗೆಗೆ ಅವಶ್ಯವಿರುವ ಹಾಲಿನ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಹೈನೋದ್ಯಮ ರೈತರ ಆದಾಯಕ್ಕೆ ಹೇಗೆ ವರದಾನವಾಯಿತು, ಮುಂದಿನ ದಿನಗಳಲ್ಲಿ ಹೈನುಗಾರಿಕೆಗೆ ಬರುವಂತಹ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.


ವಿಶ್ವ ಪರಿಸರ ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ 5 ಜೂನ್ 2021ರಂದು ವಿಶ್ವ ಪರಿಸರ ದಿನಾಚರಣೆಯನ್ನು ಕೆವಿಕೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಹಾಗು ಭಾರತ ಅಮೃತ ಮಹೋತ್ಸವದ ಅಂಗವಾಗಿ ರೈತರಿಗೆ ಉಚಿತವಾಗಿ ಹೆಬ್ಬೇವು, ಸಿಲ್ವರ್, ತೇಗ, ಪಿಚಕಾರಿ, ಬೇವು, ಹೊಂಗೆ, ನೇರಳೆ ಹಾಗು ಹಲಸು ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆವಿಕೆಯ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರು (ಪ್ರಭಾರ) ಶ್ರೀಮತಿ ಹೆಚ್.ವಿ. ದಿವ್ಯಾರವರು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ಮತ್ತು ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಈ ವರ್ಷದ ಧ್ಯೇಯ ವಾಕ್ಯವು ‘ಪರಿಸರ ವ್ಯವಸ್ಥೆಯ ಪುನ:ಸ್ಥಾಪನೆ ನಾವೆಲ್ಲರೂ ಮಾಡಬೇಕು’ ಎಂಬುದಾಗಿದೆ.


ರಸಗೊಬ್ಬರಗಳ ಸಮತೋಲನ ಬಳಕೆ ಕುರಿತು ಕಾರ್ಯಕ್ರಮ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 18 ಮೇ 2021 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (ಭಾರತ @75) ಆಚರಣೆ ಪ್ರಯುಕ್ತ ರೈತರಿಗೆ ಕೃಷಿ ಬೆಳೆಗಳಲ್ಲಿ ಸಮತೋಲನ ಗೊಬ್ಬರ ನಿರ್ವಹಣೆ ಬಗ್ಗೆ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ. ರಾಜಣ್ಣ ರವರು ಮಣ್ಣು ಪರೀಕ್ಷೆ ಉದ್ದೇಶ, ಮಣ್ಣಿನ ರಸಸಾರ ಮತ್ತು ಲವಣಾಂಶದ ಪ್ರಮಾಣ ಹಾಗೂ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ದ್ವಿತಿಯ ಪೋಷಕಾಂಶಗಳು ಹಾಗೂ ಲಘು ಪೋಷಕಾಂಶಗಳ ನಿರ್ವಹಣೆಯನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಸರಿದೂಗಿಸಬೇಕಾಗುತ್ತದೆ ಎಂದು ತಿಳಿಸಿದರು. ಇದಲ್ಲದೇ ಮಣ್ಣು ಮಾದರಿ ತೆಗೆಯುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು ಹಾಗೂ ಜಮೀನಿನಲ್ಲಿ ಮಣ್ಣಿನ ಮಾದರಿಯನ್ನು ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಗೆ ಮೂಲಕ ವಿವರಿಸಲಾಯಿತು.


ತಾರಸಿ ತೋಟದ ತರಬೇತಿ

ದಿನಾಂಕ 29 ಜೂನ್ 2021 ರಂದು ಮೈಸೂರು ಜಿಲ್ಲೆಯ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಐಸಿಎಆರ್ ಐಐಎಚ್ಆರ್ ಕೃಷಿ ವಿಜ್ಞಾನ ಕೇಂದ್ರ, ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (ಭಾರತ @75) ಆಚರಣೆ ಪ್ರಯುಕ್ತ ಸಾವಯವ ತಾರಸಿ ತೋಟದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗೋಣಿಕೊಪ್ಪಲು ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಡಾ.ಬಿ. ಪ್ರಭಾಕರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಾರಸಿ ತೋಟದಲ್ಲಿ ಬೆಳೆಯಬಹುದಾದಂತಹ ತರಕಾರಿಗಳು ಹಾಗೂ ಹಣ್ಣುಗಳು, ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲಕ್ಕೆ ಸೂಕ್ತವಾಗುವ ತರಕಾರಿಗಳು, ಬಹುವಾರ್ಷಿಕ ಬೆಳೆಗಳು, ತಾರಸಿ ತೋಟ ಮಾಡಲು ಬೇಕಾಗುವ ಪರಿಕರಗಳು, ತಾರಸಿ ತೋಟದ ಪೋಷಣೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೆಎಸ್ಎಸ್ ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಮತೋಲನ ಆಹಾರದ ಗುಂಪುಗಳು, ಹಣ್ಣು ಮತ್ತು ತರಕಾರಿಗಳ ಮಹತ್ವ, ಅವುಗಳ ಸೇವನೆ ಪ್ರಮಾಣ, ಅಧಿಕ ಕೀಟನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.


ಆಹಾರ ಹಾಗೂ ಪರಿಸರ ಭದ್ರತೆಯಲ್ಲಿ ಸೂಕ್ಷ್ಮ ಜೀವಿಗಳ ಪಾತ್ರದ ಕುರಿತು ತರಬೇತಿ

ದಿನಾಂಕ 25 ಜೂನ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (ಭಾರತ @75) ಆಚರಣೆ ಪ್ರಯುಕ್ತ ರೈತ ಹಾಗೂ ರೈತ ಮಹಿಳೆಯರಿಗೆ ಆಹಾರ ಹಾಗೂ ಪರಿಸರ ಭದ್ರತೆಯಲ್ಲಿ ಸೂಕ್ಷ್ಮ ಜೀವಿಗಳ ಪಾತ್ರದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಯಮತಿ ನೇತ್ರಾವತಿ ಎತ್ತಿನಮನಿಯವರು ಮಾತನಾಡಿ ಆಹಾರ ಉತ್ಪಾದನೆಯ ವಿವಿಧ ಹಂತಗಳಲ್ಲಿ ಸೂಕ್ಷ್ಮ ಜೀವಿಗಳು ಮಹತ್ವದ ಪಾತ್ರವನ್ನು ಕುರಿತು ಮಾಹಿತಿ ನೀಡಿದರು.


ಸಕ್ಕರೇತರ ಉತ್ಪನ್ನಗಳ ತಯಾರಿಕೆಗೆ ಕಬ್ಬಿನ ಬಳಕೆ ಕುರಿತು ತರಬೇತಿ

ದಿನಾಂಕ 28 ಜೂನ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜನಗೂಡು ತಾಲ್ಲೂಕು ಸೋನಹಳ್ಳಿ ಗ್ರಾಮದಲ್ಲಿ ಭಾರತ ಅಮೃತ ಮಹೋತ್ಸವ (India@75) ಕಾಯ೵ಕ್ರಮದಡಿ ಸಕ್ಕರೇತರ ಉತ್ಪನ್ನಗಳ ತಯಾರಿಕೆಗೆ ಕಬ್ಬಿನ ಬಳಕೆ ಕುರಿತಾದ ತರಬೇತಿ ಕಾಯ೵ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಕಬ್ಬಿನಿಂದ ತಯಾರಾಗುವ ಉಪಉತ್ಪನ್ನಗಳು ಹಾಗೂ ಅವುಗಳ ಬಳಕೆ ಕುರಿತಾಗಿ ಮಾಹಿತಿ ನೀಡಿದರು. ಸಕ್ಕರೆ ಕಾಖಾ೵ನೆಯಿಂದ ಸಕ್ಕರೆ ಜೊತೆಗೆ ಹೊರಬರುವ ಉಪಉತ್ಪನ್ನಗಳಾದ ಪ್ರೆಸ್ ಮಡ್ ನ್ನು ಕಾಂಪೋಸ್ಟ್ ಗಾಗಿ, ಬಯೋಗ್ಯಾಸ್ ನ್ನು ವಿದ್ಯುತ್ ಚ್ಶಕ್ತಿ ಉತ್ಪಾದನೆಗೆ, ಕಬ್ಬಿನ ರಸವನ್ನು ಎಥೇನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಬ್ಬಿನ ಸ್ಟಾಚ್೵ ಬಳಸಿ ಪರಿಸರ ಸ್ನೇಹಿ ಬಯೋಪ್ಲಾಸ್ಟಿಕ್ ನ್ನು ತಯಾರಿಸಲಾಗುತ್ತಿದೆ. ಇಥೇನಾಲ್ ನ್ನು ಸಾನಿಟೈಸರ್ ಹಾಗೂ ಬಯೋಡೀಸಲ್ ತಯಾರಿಕೆಯಲ್ಲೂ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮತ್ತು ಸುಸ್ಥಿರ ಮೀನುಗಾರಿಕೆಗೆ ಪರಿಸರ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎರಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿಜಯಪುರದ, ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಜೂನ್ 30 ರಂದು ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮತ್ತು ಸುಸ್ಥಿರ ಮೀನುಗಾರಿಕೆಗೆ ಪರಿಸರ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಆನ್ ಲೈನ್ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹ ಪ್ರಾಧ್ಯಾಪಕರುಗಳಾದ ಡಾ. ವಿಜಯಕುಮಾರ್ ಎಸ್ ಮತ್ತು ಡಾ. ವಿಜಯಕುಮಾರ್ ಅತ್ನೂರ್ ರವರು ಭಾಗವಹಿಸಿದ್ದರು.


ಕ್ಷೇತ್ರ ಭೇಟಿ

ದಿನಾಂಕ 28.06.2021 ರಂದು ದ್ವಿದಳ ಧಾನ್ಯ ಬೀಜೋತ್ಪಾದನೆ ಯೋಜನೆಯಡಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ. ಹಾಗೂ ಬೀಜೋತ್ಪಾದನೆ ಯೋಜನೆಯ ತಾಂತ್ರಿಕ ಸಹಾಯಕರಾದ ಕುಮಾರಿ ಶಿಲ್ಪಾ ರವರು ಟಿ. ನರಸೀಪುರ ತಾಲ್ಲೂಕಿನ ಬನ್ನಳ್ಳಿಹುಂಡಿ ಗ್ರಾಮದ ಉದ್ದಿನ (ಎಲ್.ಬಿ.ಜಿ 791) ತಾಕುಗಳಿಗೆ ಭೇಟಿ ನೀಡಿ ಬೆರಕೆ ಗಿಡಗಳನ್ನು ಗುರುತು ಹಿಡಿಯುವುದು ಹಾಗೂ ಬೆರಕೆ ತೆಗೆದ ನಂತರ ಉದ್ದಿನ ಬೀಜಗಳನ್ನು ಚೆನ್ನಾಗಿ ಒಣಗಿಸುವಂತೆ ತಿಳಿಸಿದರು.


ಭತ್ತದ ಹೊಸ ತಳಿ ಕೆಎಂಪಿ 225 ತಳಿಯ ತಂತ್ರಜ್ಞಾನ ಪರಿಶೀಲನೆ

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಭತ್ತದ ಹೊಸ ತಳಿ ಕೆಎಂಪಿ 225 ತಳಿಯ ತಂತ್ರಜ್ಞಾನ ಪರಿಶೀಲನೆ ಹಾಗು ಬೀಜೋಪಚಾರ ಕುರಿತು ತರಬೇತಿಯನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ಬೀಜೋಪಚಾರದ ಮಹತ್ವದ ಕುರಿತು ತಿಳಿಸಿ, ಬೀಜೋಪಚಾರವನ್ನು ಹೇಗೆ ಮಾಡಬೇಕೆಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಭತ್ತಕ್ಕೆ ಬರುವ ಹಲವು ರೋಗಗಳು ಬೀಜದಿಂದ ಹಾಗು ಮಣ್ಣಿನಿಂದ ಹರಡುತ್ತದೆ. ಬೀಜೋಪಚಾರ ಮಾಡುವುದರಿಂದ ಕೇವಲ 100ರೂಪಾಯಿಯ ಖರ್ಚಿನಲ್ಲಿ ಮುಂದೆ ರೋಗದಿಂದ ಆಗುವ ಹಾನಿಯನ್ನು ತಡೆದು, ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು. ಅಲ್ಲದೇ, ಯಾವುದೇ ರೋಗ ಬಂದರೆ ಇಳುವರಿಯಲ್ಲಿ ಆಗಬಹುದಾದ ಕುಂಠಿತವನ್ನು ತಡೆಯಬಹುದು. ಆದ್ದರಿಂದ ರೈತರು ಬೀಜೋಪಚಾರವನ್ನು ಪ್ರಮುಖ ಅಂಶವೆಂದು ಗಮನಿಸಿ ಬೇಸಾಯ ಕ್ರಮದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಅರಕೆರೆ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ತರಬೇತಿ ಹಾಗೂ ಜಲಶಕ್ತಿ ಅಭಿಯಾನ

ದಿನಾಂಕ 5 ಜುಲೈ 2021 ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ತರಬೇತಿ ಕಾರ್ಯಕ್ರಮ ಹಾಗೂ ಜಲಶಕ್ತಿ ಅಭಿಯಾನದಡಿ ರೈತರಿಗೆ ಗಿಡಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ಉಪಸ್ಥಿತರಿದ್ದರು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಕೈತೋಟದಲ್ಲಿ ಬೆಳೆಯಬಹುದಾದಂತಹ ಸೊಪ್ಪುಗಳು, ತರಕಾರಿಗಳು ಹಾಗೂ ಹಣ್ಣಿನ ಗಿಡಗಳ ಮಹತ್ವ ಹಾಗೂ ದಿನನಿತ್ಯದ ಆಹಾರದಲ್ಲಿ ಅವುಗಳನ್ನು ಬಳಸುವ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ಜಲಶಕ್ತಿ ಅಭಿಯಾನದ ಅಂಗವಾಗಿ ಅರಕೆರೆ ಗ್ರಾಮದ 25 ರೈತ/ರೈತ ಮಹಿಳೆಯರಿಗೆ ನುಗ್ಗೆ, ಕರಿಬೇವು, ಚಕ್ರಮುನಿ, ಪಪ್ಪಾಯ ಹಾಗೂ ನಿಂಬೆ ಗಿಡಗಳನ್ನು ವಿತರಿಸಲಾಯಿತು.


ಭತ್ತದ ಹೊಸ ತಳಿ ಎಮ್‌ಎಸ್‌ಎನ್-99 ಪರಿಚಯ

ದಿನಾಂಕ 08-07-2021 ರಂದು ಐ.ಸಿ.ಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರು ವತಿಯಿಂದ ಹೆಗ್ಗಡದೇವನಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಭತ್ತದ ಹೊಸ ತಳಿಗಳ ಪರಿಚಯ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಭತ್ತದ ಸುಧಾರಿತ ಬೇಸಾಯ ಕ್ರಮಗಳು, ಭತ್ತದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಮಣ್ಣು ಮತ್ತು ನೀರಿನ ನಿರ್ವಹಣೆ ಹಾಗು ಸುಧಾರಿತ ಭತ್ತದ ತಳಿಗಳ ಕುರಿತು ಮಾಹಿತಿ ನೀಡುತ್ತಾ ಭತ್ತದ ಸಣ್ಣ ಅಕ್ಕಿಯ ತಳಿ ಆರ್‌ಎನ್‌ಆರ್-15048 ಗೆ ಪರ್ಯಾಯವಾಗಿ ಎಮ್‌ಎಸ್‌ಎನ್-99 ತಳಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು ಈ ತಳಿಯು ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುತ್ತದೆ ಜೊತೆಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸೂಕ್ತವಾದ ತಳಿಯಾಗಿರುವುದರಿಂದ ಈ ತಳಿಯ ಬಳಕೆಯಿಂದ ಭತ್ತದ ನಾಟಿಯ ವಿಳಂಬದಿಂದಾಗುತ್ತಿರುವ ಇಳುವರಿಯ ನಷ್ಟವನ್ನು ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.


ಮುಂಚೂಣಿ ಪ್ರಾತ್ಯಕ್ಷಿಕೆ ಹಾಗು ಬೀಜೋಪಚಾರ ಕುರಿತು ತರಬೇತಿ(ಭತ್ತದ ಹೊಸ ತಳಿ ಕೆಎಂಪಿ 220)

ದಿನಾಂಕ 08.07.2021 ರಂದು ತರಬೇತಿಯನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ಬೀಜೋಪಚಾರದ ಮಹತ್ವದ ಕುರಿತು ತಿಳಿಸಿ, ಬೀಜೋಪಚಾರವನ್ನು ಹೇಗೆ ಮಾಡಬೇಕೆಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಭತ್ತಕ್ಕೆ ಬರುವ ಹಲವು ರೋಗಗಳು ಬೀಜದಿಂದ ಹಾಗು ಮಣ್ಣಿನಿಂದ ಹರಡುತ್ತದೆ. ಬೀಜೋಪಚಾರ ಮಾಡುವುದರಿಂದ ಕೇವಲ 50-100 ರೂಪಾಯಿಯ ಖರ್ಚಿನಲ್ಲಿ ಮುಂದೆ ರೋಗದಿಂದ ಆಗುವ ಹಾನಿಯನ್ನು ತಡೆದು, ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು. ಅಲ್ಲದೇ, ಯಾವುದೇ ರೋಗ ಬಂದರೆ ಇಳುವರಿಯಲ್ಲಿ ಆಗಬಹುದಾದ ಕುಂಠಿತವನ್ನು ತಡೆಯಬಹುದು. ಆದ್ದರಿಂದ ರೈತರು ಬೀಜೋಪಚಾರವನ್ನು ಪ್ರಮುಖ ಅಂಶವೆಂದು ಗಮನಿಸಿ ಬೇಸಾಯ ಕ್ರಮದಲ್ಲಿ ಕಡ್ಡಾಯವಾಗಿ ಅಡವಳಿಸಿಕೊಳ್ಳಬೇಕು ಎಂದು ತಿಳಿಸಿದರು.


93ನೇ ಐಸಿಎಆರ್ ಸಂಸ್ಥಾಪನಾ ದಿನ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ 93ನೇ ಐಸಿಎಆರ್ ‍ಸಂಸ್ಥಾಪನಾ ದಿನದ ಅಂಗವಾಗಿ ದಿನಾಂಕ 16.07.2021 ರಂದು ಕೆವಿಕೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ಪ್ರಾಸ್ತಾವಿಕ ನುಡಿ ನುಡಿದರು. ರೈತರು, ತಮ್ಮ ಜಮೀನಿನ ಬದುಗಳಲ್ಲಿ ಹಾಗು ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಮೋದಿಜೀಯವರ ಮಾತಿನಂತೆ “ಹರ್ ಮೇದ್ ಮೆ ಪೇಡ್” ಅಂದರೆ, ಎಲ್ಲಾ ಬದುಗಳಲ್ಲಿ ಗಿಡ ನೆಟ್ಟು ಭೂಮಿಗೆ ಹಸಿರು ಹೊದಿಕೆ ಹೊದಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸುತ್ತಮುತ್ತಲಿನ ರೈತರು ಭಾಗವಹಿಸಿ ಗಿಡ ನೆಟ್ಟರು. ರೈತರು ತಮ್ಮ ಜಮೀನಿನಲ್ಲಿಯೂ ಖಾಲಿ ಜಾಗ ಹಾಗು ಬದುಗಳ ಮೇಲೆ ಗಿಡ ನೆಟ್ಟು ಪೋಷಿಸುವುದಾಗಿ ಭರವಸೆ ನೀಡಿದರು.


ಜಲಶಕ್ತಿ ಅಭಿಯಾನದಡಿ ಸೂಕ್ತ ಬೆಳೆಗಳು ಹಾಗು ಬೆಳೆ ಪದ್ಧತಿಗಳು ಕುರಿತಾದ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ದಿನಾಂಕ 19-07-2021 ರಂದು ನಂಜನಗೂಡು ತಾಲ್ಲೂಕಿನ ಸೋನಹಳ್ಳಿ ಗ್ರಾಮದಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮದಡಿ ಸೂಕ್ತ ಬೆಳೆಗಳು ಹಾಗು ಬೆಳೆ ಪದ್ಧತಿಗಳು ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಹೆಚ್. ವಿ. ದಿವ್ಯಾ ರವರು ಜಲಶಕ್ತಿ ಅಭಿಯಾನದ ಕುರಿತು ಮಾತನಾಡಿ ನೀರಿನ ಮೌಲ್ಯ ಹಾಗು ನೀರಿನ ಸಂರಕ್ಷಣೆ ಕುರಿತು ತಿಳಿಸಿ ಕೊಟ್ಟರು. ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿಯಾದ ಶ್ರೀ ಶಾಮರಾಜ್‌ರವರು ಮಣ್ಣು ಮತ್ತು ನೀರಿನ ಪರೀಕ್ಷೆ ಕೈಗೊಂಡು ಬೆಳೆಗಳನ್ನು ಆಯ್ಕೆಮಾಡಿ ಬೆಳೆಯುವುದು ಹೆಚ್ಚು ಸೂಕ್ತವೆಂದು ತಿಳಿಸಿದರು. ಮಳೆಯಾಶ್ರಯ ಹಾಗು ನೀರಾವರಿಯಲ್ಲಿ ಬೆಳೆಯುವ ಬೆಳೆಗಳು ಹಾಗು ಬೆಳೆ ಪದ್ಧತಿಗಳ ನಿರ್ವಹಣಿ ಕುರಿತು ಮಾಹಿತಿ ನೀಡುತ್ತಾ ವಲಯವಾರಿಗೆ ಸೂಕ್ತವಾದ ಬೆಳೆಗಳು ಹಾಗು ತಳಿಗಳನ್ನು ಬೆಳೆಯಬೇಕೆಂದು ತಿಳಿಸಿಕೊಟ್ಟರು.


ನವಣೆ ಡಿಎಚ್ಎಫ್ ಟಿ 109-3 ತಳಿಯ ಪ್ರಾತ್ಯಕ್ಷಿಕೆ ತರಬೇತಿ

ದಿನಾಂಕ 20 ಜುಲೈ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನದ ವತಿಯಿಂದ ಕೆ. ಆರ್. ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನವಣೆ ಡಿಎಚ್ಎಫ್ ಟಿ 109-3 ತಳಿಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಮಾತನಾಡಿ ನವಣೆಯು ಸಿರಿಧಾನ್ಯಗಳಲ್ಲಿ ಒಂದಾಗಿದ್ದು, ಅಧಿಕ ಪ್ರಮಾಣದಲ್ಲಿ ನಾರು ಪದಾರ್ಥ, ಕಬ್ಬಿಣ ಹಾಗೂ ಇತರೆ ಖನಿಜಗಳು ಹಾಗೂ ಜೀವಸತ್ವಗಳನ್ನು ಹೊಂದಿದೆ. ನವಣೆ ಸೇವನೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇತರೆ ಖಾಯಿಲೆಗಳನ್ನು ನಿಯಂತ್ರಿಸಬಹುದು. ನವಣೆ ಡಿಎಚ್ಎಫ್ ಟಿ 109-3 ತಳಿಯು 90 ದಿನಗಳಲ್ಲಿ ಕಟಾವಿಗೆ ಬರುವಂತದ್ದಾಗಿದ್ದು, ಎಕರೆಗೆ 7-8 ಕ್ವಿಂಟಲ್ ಇಳುವರಿ ಬರುವುದು. ಇದರ ಹುಲ್ಲು ಹಸುಗಳಿಗೆ ಒಳ್ಳೆಯ ಮೇವಾಗಿದೆ. ರೈತ/ರೈತ ಮಹಿಳೆಯರು ನವಣೆ ಬೆಳೆದು ಆಹಾರದಲ್ಲಿ ಬಳಸಬೇಕು ಹಾಗೂ ಬೆಳೆ ಕಟಾವಾದ ನಂತರ ನವಣೆ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ತಿಳಿಸಿದರು.


ಹಾಲು ಬಿಡಿಸುವ ಕುರಿಮರಿಗಳ ಉತ್ತಮ ಬೆಳವಣಿಗೆಗೆ ಪ್ರೊಬಿಟಿಕ್ಸ್ ಕುರಿತಾದ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನದ ವತಿಯಿಂದ ದಿನಾಂಕ 20.07.2021 ರಂದು ಕೆ.ಆರ್. ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಹಾಲು ಬಿಡಿಸುವ ಕುರಿಮರಿಗಳ ಉತ್ತಮ ಬೆಳವಣಿಗೆಗೆ ಪ್ರೊಬಿಟಿಕ್ಸ್ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಕೆವಿಕೆಯ ಪಶು ವಿಜ್ಞಾನಿಯಾದ ಡಾ. ಯುಂ. ಎಂ. ರಕ್ಷಿತ್ ರಾಜ್ ರವರು ಮಾತನಾಡಿ ಹಲವಾರು ರೈತರು ಇಂದು ಕುರಿ ಸಾಕಾಣಿಕೆಯಲ್ಲಿ ಲಾಭವಿದೆಯೆಂದು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ ಆದರೆ ಅವೈಜ್ಞಾನಿಕ ನಿರ್ವಹಣೆಯಿಂದ ಬಹಳಷ್ಟು ಮಂದಿ ನಷ್ಟವನ್ನು ಅನುಭವುಸುತ್ತಿದ್ದಾರೆ. ಕುರಿಮರಿಗಳಲ್ಲಿ ಜಂತುಹುಳಗಳ ಸಮಸ್ಯೆ ಹೆಚ್ಚು ಮತ್ತು ಅವುಗಳ ತೊಂದರೆಯಿಂದ ಕುರಿಮರಿಗಳು ಹೆಚ್ಚು ಸಾಯುವುದಲ್ಲದೆ ಇತರ ಕುರಿಮರಿಗಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿದೆ. ಆದ್ದರಿಂದ ರೈತರು ಕುರಿಮರಿಗಳಿಗೆ ಒಂದು ತಿಂಗಳು ತುಂಬುವ ಮುಂಚೆ ಜಂತುನಾಶಕ ಔಷಧಿ ಕುಡಿಸಬೇಕು ಮತ್ತು ಕುರಿಮರಿಗಳು ಕಡಿಮೆ ಅವಧಿಯಲ್ಲಿ ಉತ್ತಮ ಬೆಳವಣಿಗೆ ಪಡೆಯಲು ಆಹಾರದಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವಂತ ಪ್ರೊಬಯೋಟಿಕ್ಸ್ ಬಳಸಬೇಕೆಂದು ತಿಳಿಸಿದರು. ತರಬೇತಿಯ ನಂತರ 10 ರೈತ /ರೈತ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ನವಣೆ ಬಿತ್ತನೆ ಬೀಜಗಳನ್ನು ಮತ್ತು ಇತರೆ 10 ರೈತ/ರೈತ ಮಹಿಳೆಯರಿಗೆ ಜಂತುನಾಶಕ ಹಾಗೂ ಪ್ರೊಬಯೋಟಿಕ್ಸ್ ಪುಡಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ 35 ಕ್ಕಿಂತಲೂ ಹೆಚ್ಚು ರೈತ /ರೈತ ಮಹಿಳೆಯರು ಭಾಗವಹಿಸಿದ್ದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: